ಮಧ್ಯ ಪ್ರದೇಶ:ಬುಡಕಟ್ಟು ಸಮುದಾಯದ 5 ತಿಂಗಳಗರ್ಭಿಣಿಯ ಕೈಯಲ್ಲೇ ಆಸ್ಪತ್ರೆ ಸಿಬ್ಬಂದಿ ಆಕೆಯ ಪತಿ ಸಾವನ್ನಪ್ಪಿದ ಬೆಡ್ ಸ್ವಚ್ಚಗೊಳಿಸಿದ ಘಟನೆ ಶನಿವಾರ ಮಧ್ಯ ಪ್ರದೇಶದ ಡಿಂಡೋರಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಆಸ್ಪತ್ರೆಯ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ದಿಂಡೋರಿ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ನಡೆದಿದ್ದೇನು?: "ಗುರುವಾರ ರಾತ್ರಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರಿಂದ ಹಲ್ಲೆಗೊಳಗಾದ ರಘುರಾಜ್ ಮಾರವಿ (28) ಎಂಬವರು ಡಿಂಡೋರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಿಸದೆ ಶನಿವಾರ ಸಾವನ್ನಪ್ಪಿದರು. ಹಾಸಿಗೆಯಲ್ಲಿದ್ದ ರಕ್ತದ ಕಲೆಗಳನ್ನು ಅಲ್ಲಿದ್ದ ನರ್ಸಿಂಗ್ ಸಿಬ್ಬಂದಿ ಮೃತ ವ್ಯಕ್ತಿಯ 5 ತಿಂಗಳ ಗರ್ಭಿಣಿ ಪತ್ನಿ ರೋಶನಿ ಭಾಯಿ ಅವರಿಂದ ಸ್ವಚ್ಚಗೊಳಿಸಿದ್ದಾರೆ. ನರ್ಸಿಂಗ್ ಅಧಿಕಾರಿ ರಾಕುಮಾರಿ ಮಾರ್ಕಮ್ ಮತ್ತು ಸಹಾಯಕ ಚೋಟ್ಟಿ ಬಾಯಿ ಠಾಕೂರ್ ಎಂಬವನ್ನು ಅಮಾನತು ಮಾಡಿದ್ದೇವೆ. ಸಿಬ್ಬಂದಿಗೆ ಸಹಾಯ ಮಾಡಿದ ಮೆಡಿಕಲ್ ಅಧಿಕಾರಿ ಡಾ.ಚಂದ್ರಶೇಖರ್ ಸಿಂಗ್ ಅವರನ್ನು ವರ್ಗಾಯಿಸಿದ್ದೇವೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.