ಚೆನ್ನೈ(ತಮಿಳುನಾಡು):ದೇವಸ್ಥಾನ, ಮಂಟಪಗಳು, ಖಾಸಗಿ ಸ್ಥಳಗಳಲ್ಲಿ ನಡೆಸುವ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂಬ ರಾಜ್ಯ ಸರ್ಕಾರದ ನಿಯಮದನುಸಾರ ಅಯೋಧ್ಯೆ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಬಹುದು ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ಹೇಳಿದೆ. ರಾಮಭಜನೆ, ಅನ್ನದಾನಕ್ಕೂ ಅನುಮತಿ ಬೇಕಿಲ್ಲ ಎಂದಿದೆ.
ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರಪ್ರಸಾರವನ್ನು ರಾಜ್ಯದಲ್ಲಿ ತಡೆಯಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಧಾರ್ಮಿಕ ಮತ್ತು ಖಾಸಗಿ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನುಮತಿ ಬೇಕಾಗಿಲ್ಲ ಎಂದು ರಾಜ್ಯ ಸರ್ಕಾರವೇ ನಿಯಮ ರೂಪಿಸಿದೆ. ಹೀಗಾಗಿ ಅದರ ಅನುಸಾರ ಪೊಲೀಸರ ಅನುಮತಿ ಪಡೆಯಬೇಕಿಲ್ಲ ಎಂದು ಹೇಳಿದೆ.
ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ದೇವರ ಮೇಲಿನ ಭಕ್ತಿ ಮಾತ್ರ ಇರುತ್ತದೆ. ನಿಯಮಗಳನ್ನು ಹೇರಿ ಶಾಂತಿ, ಸಂತಸ ಮತ್ತು ಸಾಮಾಜಿಕ ಸಮತೋಲನ ಕದಡಬಾರದು ಎಂದು ಇದೇ ವೇಳೆ ಹೇಳಿದೆ.
ರಾಮಮಂದಿರ ನೇರಪ್ರಸಾರಕ್ಕೆ ಮುಕ್ತ ಅವಕಾಶ:ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುತ್ತಿರುವ ಭವ್ಯ ಮಂದಿರದ ಉದ್ಘಾಟನೆ ಮತ್ತು ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರಪ್ರಸಾರ ಮಾಡಲು ಸಂಘಟಕರಿಗೆ ಮುಕ್ತವಾಗಿ ಅವಕಾಶ ನೀಡಲಾಗುವುದು. ಇದು ಭಕ್ತಿಯ ಕಾರ್ಯಕ್ರಮ. ಹೀಗಾಗಿ ತಡೆ ಮತ್ತು ಅನುಮತಿ ಕೋರುವ ಅಗತ್ಯ ಬೀಳದು ಎಂದು ಅಭಿಪ್ರಾಯಪಟ್ಟಿದೆ.