ಚೆನ್ನೈ(ತಮಿಳುನಾಡು): ಲೋಕಸಭೆ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಬಿಸಿಲಿನ ಝಳದಿಂದಾಗಿ ಸೆಕೆ ತಾಳಲಾರದೆ ಮತಗಟ್ಟೆಯೊಳಗೆ ಓರ್ವ ಮಹಿಳೆ ಸೇರಿ ಮೂವರು ವೃದ್ಧರು ಪ್ರಜ್ಞೆ ತಪ್ಪಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆಯಿತು. ಮೂರು ಘಟನೆಗಳು ಪ್ರತ್ಯೇಕ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವರದಿಯಾಗಿವೆ. ಪಳನಿಸ್ವಾಮಿ (65), ಕನಕರಾಜ್ (72) ಮತ್ತು ಚಿನ್ನ ಪೊನ್ನು (77) ಮೃತರೆಂದು ಗುರುತಿಸಲಾಗಿದೆ.
ತಮಿಳುನಾಡಿನ ಎಲ್ಲ 39 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಬಿರುಸಿನಿಂದ ಮತದಾನ ಸಾಗುತ್ತಿದೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.51.41ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ. ಧರ್ಮಪುರಿ ಕ್ಷೇತ್ರದಲ್ಲಿ ಗರಿಷ್ಠ 57.86ರಷ್ಟು ಮತದಾನವಾಗಿದ್ದರೆ, ಚೆನ್ನೈ ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.41.47ರಷ್ಟು ಮತ ಚಲಾವಣೆಯಾಗಿದೆ.
ಘಟನೆ -1: ಸೇಲಂ ಸಂಸದೀಯ ಕ್ಷೇತ್ರ ವ್ಯಾಪ್ತಿಯಲ್ಲಿ ಪಳನಿಸ್ವಾಮಿ (65) ಮತದಾನ ಕೇಂದ್ರದಲ್ಲೇ ಹಠಾತ್ ಪ್ರಜ್ಞೆ ತಪ್ಪಿ ಬಿದ್ದು ಸಾವನ್ನಪ್ಪಿದರು. ಇವರು ಸೇಲಂ ಪಶ್ಚಿಮ ವಿಧಾನಸಭಾ ಕ್ಷೇತ್ರ ಸೂರಮಂಗಲಂ ಮತಗಟ್ಟೆಗೆ ಮತದಾನ ಮಾಡಲು ಬಂದಿದ್ದರು.