ನವದೆಹಲಿ :ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ದೊಡ್ಡ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಶ್ಲಾಘಿಸಿದ್ದಾರೆ. ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಗೆದ್ದಿದೆ ಎಂದು ಬಣ್ಣಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಬಿಜೆಪಿಗೆ ಐತಿಹಾಸಿಕ ಗೆಲುವು ನೀಡಿದ್ದಕ್ಕಾಗಿ ದೆಹಲಿಯ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಅಭಿನಂದನೆಗಳು. ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದಿಂದ ಕೃತಜ್ಞತೆ. ದೆಹಲಿಯ ಸರ್ವತೋಮುಖ ಅಭಿವೃದ್ಧಿ, ಜನರ ಜೀವನವನ್ನು ಉತ್ತಮಗೊಳಿಸಲು ಸಿಗುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದು ಖಾತರಿಪಡಿಸುತ್ತೇವೆ ಎಂದಿದ್ದಾರೆ.
ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ದೆಹಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಕ್ಷಕ್ಕೆ ಇಷ್ಟು ದೊಡ್ಡದ ಮಟ್ಟದ ಜನಾದೇಶ ಬರುವಲ್ಲಿ ಹಗಲಿರುಳು ಶ್ರಮಿಸಿದ ಪಕ್ಷದ ನನ್ನ ಎಲ್ಲಾ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಈಗ ನಾವು ದೆಹಲಿಯ ಜನರಿಗೆ ಸೇವೆ ಸಲ್ಲಿಸಲು ಇನ್ನಷ್ಟು ಶ್ರಮವಹಿಸಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.
ದೆಹಲಿ ಗದ್ದುಗೆಗೆ ಬಿಜೆಪಿ ಬಾದ್ಶಾ :ಪ್ರಸ್ತುತ ಫಲಿತಾಂಶದ ಪ್ರಕಾರ, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 40 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, 10 ರಲ್ಲಿ ಮುನ್ನಡೆ ಹೊಂದಿದೆ. ಆಮ್ ಆದ್ಮಿ ಪಕ್ಷ (ಆಪ್) 19 ರಲ್ಲಿ ಗೆದ್ದು 4 ರಲ್ಲಿ ಮುನ್ನಡೆ ಹೊಂದಿದೆ. ಉಳಿದಂತೆ ಕಾಂಗ್ರೆಸ್ ಸತತ ಮೂರನೇ ಚುನಾವಣೆಯಲ್ಲೂ ಒಂದೇ ಒಂದು ಸ್ಥಾನ ಗಳಿಸುವಲ್ಲಿ ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿದೆ.
ಆಪ್ಗೆ ಹ್ಯಾಟ್ರಿಕ್ ಚಾನ್ಸ್ ಮಿಸ್ :ಕಳೆದ ಎರಡು ಚುನಾವಣೆಗಳಲ್ಲಿ ಸತತವಾಗಿ ಗೆದ್ದು ದೆಹಲಿ ಗದ್ದುಗೆಯಲ್ಲಿ ಅಧಿಕಾರ ನಡೆಸಿದ್ದ ಆಮ್ ಆದ್ಮಿ ಪಕ್ಷವು (ಆಪ್) ಮೂರನೇ ಪರೀಕ್ಷೆಯಲ್ಲಿ ನಪಾಸಾಗಿದೆ. ಕಳೆದ 10 ವರ್ಷದಿಂದ ಅಧಿಕಾರದಲ್ಲಿದ್ದ ಪಕ್ಷವು ಕೇಸರಿ ಪಡೆಯ ಮುಂದೆ ಮಂಡಿಯೂರಿದೆ. ಕೇವಲ 19 ಸ್ಥಾನಗಳಲ್ಲಿ ಗೆದ್ದು, 4 ಕಡೆಗಳಲ್ಲಿ ಮುನ್ನಡೆಯಲ್ಲಿದೆ. ಈ ಮೂಲಕ ಹೀನಾಯ ಸೋಲು ಕಂಡಿದೆ.