ಶ್ರೀನಗರ:ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಬಹುನಿರೀಕ್ಷಿತ ಝಡ್ ಮೋರ್ಹ್ ಟನಲ್ ಉದ್ಘಾಟಿಸಲಿದ್ದಾರೆ. ಶ್ರೀನಗರ ಮತ್ತು ಲಡಾಖ್ ನಡುವೆ ಎಲ್ಲಾ ಋತುಮಾನದಲ್ಲೂ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಯೋಜನೆ ಇದಾಗಿದೆ.
₹2,680 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸುರಂಗ ಮಾರ್ಗ ಝೋಜಿಲಾ ಸುರಂಗ ಯೋಜನೆಯ ನಿರ್ಣಾಯಕ ಭಾಗವಾಗಿದೆ. 2030ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಶ್ರೀನಗರದಿಂದ ಲಡಾಖ್ ನಡುವೆ ಎಲ್ಲಾ ಋತುಮಾನದಲ್ಲಿ ಸಂಪರ್ಕ ಕಲ್ಪಿಸಲಿದೆ.
ಚಳಿಗಾಲದಲ್ಲಿ ಸಂಪರ್ಕ ಕಡಿದುಕೊಳ್ಳುವ ಸೋನ್ಮಾರ್ಗ್: ಶ್ರೀನಗರ ಮತ್ತು ಲಡಾಖ್ ಹೆದ್ದಾರಿಯಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣವಾಗಿರುವ ಸೋನ್ ಮಾರ್ಗ್ ಅನ್ನು ಕೂಡ ಈ ಝಡ್ ಮೋರ್ಹಾ ಟನಲ್ ಸಂಪರ್ಕಿಸುತ್ತದೆ.
ಚಳಿಗಾಲದಲ್ಲಿ ಭಾರಿ ಹಿಮಪಾತದಿಂದಾಗಿ ಸೋನ್ಮಾರ್ಗ್ ಜನರಿಗೆ ರಸ್ತೆ ಸಂಪರ್ಕ ಇಲ್ಲದಂತಾಗುತ್ತದೆ. ಹೀಗಾಗಿ ಜನರಿಗೆ ಕಣಿವೆಯ ಇತರ ಜನರೊಂದಿಗೆ ಸಂಪರ್ಕ ಸಾಧಿಸುವುದು ದುಸ್ತರವಾಗುತ್ತದೆ. ಈ ನಿಟ್ಟಿನಲ್ಲಿ ಈ ಸುರಂಗ ಮಾರ್ಗ ಪ್ರಮುಖವಾಗಿದೆ.
ಇಂದು ಬೆಳಗ್ಗೆ 11.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸುರಂಗ ಮಾರ್ಗ ಉದ್ಘಾಟಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ನಡೆದ ಮೊದಲ ಚುನಾವಣೆಯ ಬಳಿಕ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಅಜಯ್ ತಮ್ತಾ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಉಪಮುಖ್ಯಮಂತ್ರಿ ಸುರೀಂದರ್ ಕುಮಾರ್ ಚೌಧರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ, ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ ಮತ್ತು ಸಂಸದ ಗುಲಾಂ ಅಲಿ ಮುಂತಾದವರು ಭಾಗಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸ್ಥಳವನ್ನು ವಾರದ ಹಿಂದೆಯೇ ಬಿಗಿ ಭದ್ರತೆಯಲ್ಲಿ ಬಂದ್ ಮಾಡಲಾಗಿದೆ. ಲೇಹ್-ಶ್ರೀನಗರ ಹೆದ್ದಾರಿಯನ್ನು ಕೂಡ ಶನಿವಾರದಿಂದ ಬಂದ್ ಮಾಡಲಾಗಿದ್ದು, ಇಂದು ತೆರೆಯಲಾಗುತ್ತದೆ.
ಸಿಎಂ ಒಮರ್ ಅಬ್ಧುಲ್ಲಾ ಸುರಂಗ ಮಾರ್ದ ಉದ್ಘಾಟನೆ ಹಿನ್ನೆಲೆಯಲ್ಲಿ ಸಿದ್ಧತೆಗಳ ಕುರಿತು ಶುಕ್ರವಾರ ಪರಿಶೀಲನೆ ನಡೆಸಿದ್ದರು. ಈ ಕುರಿತು ಪೋಸ್ಟ್ ಮಾಡಿರುವ ಅವರು, ಎಲ್ಲಾ ಋತುಮಾನದಲ್ಲಿ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗದಿಂದ ಸೋನ್ಮಾರ್ಗ್ಗೆ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಲಿದೆ ಎಂದು ತಿಳಿಸಿದ್ದರು.
ಸುರಂಗ ಮಾರ್ಗದ ವಿಶೇಷತೆಗಳು:
- 6.4 ಕಿ.ಮೀ ಉದ್ದದ ಸುರಂಗ ಮಾರ್ಗ 10 ಮೀಟರ್ ಅಗಲವಿದೆ.
- ಎರಡು ರಸ್ತೆ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದು.
- ತುರ್ತು ಪರಿಸ್ಥಿತಿಯಲ್ಲಿ ಸವಾರರ ಸುರಕ್ಷತೆಗೆ 6.4 ಕಿ.ಮೀ ಉದ್ದ, 7.5 ಮೀಟರ್ ಅಗಲದ ಎಸ್ಕೇಪ್ ಟನಲ್ ಇದೆ.
- 80 ಕಿ.ಮೀ ವೇಗದಲ್ಲಿ ಗಂಟೆಗೆ 100 ಕಾರುಗಳು ಸಂಚರಿಸಬಹುದು.
- ಸಮುದ್ರ ಮಟ್ಟದಿಂದ 8,650 ಅಡಿ ಎತ್ತರದಲ್ಲಿದ್ದು, ಟನಲ್ನೊಳಗೆ ಗಾಳಿಯಾಡಲು ಅತ್ಯಾಧುನಿಕ ವ್ಯವಸ್ಥೆ ಮಾಡಲಾಗಿದೆ.
- ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಸ್ಥಿರತೆ ಮತ್ತು ತುರ್ತು ಸಂವಹನ ಮಾರ್ಗ, ಅಗ್ನಿಶಾಮಕ ಸಾಧನ ಮತ್ತು ಕಣ್ಗಾವಲು ವ್ಯವಸ್ಥೆ ಹೊಂದಿದೆ.
2012ರಲ್ಲಿ ಗಡಿ ರಸ್ತೆ ಸಂಸ್ಥೆ (ಬಿಆರ್ಒ) ಯೋಜನೆಯ ಹೊಣೆ ಹೊತ್ತಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಮತ್ತು ಸೌಕರ್ಯ ಅಭಿವೃದ್ಧಿ ಕಾರ್ಪೊರೇಷನ್ ನಿಯಮಿತಿ ಇದರ ನಿರ್ವಹಣೆ ನಡೆಸಿದೆ. 2023ರ ಆಗಸ್ಟ್‌ನಲ್ಲಿ ಟನಲ್ ನಿರ್ಮಾಣ ಗುರಿ ಹೊಂದಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ಚುನಾವಣೆ ಹಿನ್ನೆಲೆಯಲ್ಲಿ ಉದ್ಘಾಟನೆ ವಿಳಂಬಗೊಂಡಿದ್ದು, ಇದೀಗ ಚಾಲನೆ ಸಿಗುತ್ತದೆ.