ಸಂಬಲ್‌ಪುರ (ಒಡಿಶಾ): ಒಡಿಶಾದಲ್ಲಿ 68,000 ಕೋಟಿ ರೂ.ಗಳ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಶನಿವಾರ ನೆರವೇರಿಸಿದರು. ಈ ಯೋಜನೆಗಳು ಒಡಿಶಾದ ಯುವಕರಿಗೆ ಪ್ರಯೋಜನಕಾರಿಯಾಗಲಿದ್ದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಪ್ರತಿ ವಲಯದಲ್ಲೂ ಒಡಿಶಾಗೆ ಕೇಂದ್ರ ಬೆಂಬಲಿಸುತ್ತಿದೆ ಎಂದು ಮೋದಿ ತಿಳಿಸಿದರು.
ಸಂಬಲ್‌ಪುರದ ಐಐಎಂನ ಖಾಯಂ ಕ್ಯಾಂಪಸ್, ಪುರಿ-ಸೋನೆಪುರ್ ಸಾಪ್ತಾಹಿಕ ಎಕ್ಸ್‌ಪ್ರೆಸ್, ರಾಷ್ಟ್ರೀಯ ಗ್ಯಾಸ್ ಗ್ರಿಡ್ ಸೇರಿದಂತೆ ವಿವಿಧ 18 ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು. ಈ ಸಮಾರಂಭದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಜ್ಯಪಾಲ ರಘುಬರ್ ದಾಸ್ ಮತ್ತು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಬಿಶ್ವೇಶ್ವರ್ ತುಡು ಮತ್ತು ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.
ನಂತರ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಇತ್ತೀಚಿಗೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಯುವಕರು, ಮಹಿಳೆಯರು, ಬಡವರು, ರೈತರು ಮತ್ತು ಆದಿವಾಸಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮೋದಿ ಗ್ಯಾರಂಟಿ ದೇಶಾದ್ಯಂತ ಇರುವ ಅಸಹಾಯಕ ಜನರ ಭರವಸೆಯಾಗಿದೆ ಎಂದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಒಡಿಶಾದಲ್ಲಿ ಸುಮಾರು 40 ಲಕ್ಷ ರೈತರು ನೇರ ಪ್ರಯೋಜನ ಪಡೆದಿದ್ದಾರೆ. 2014ಕ್ಕಿಂತ ಮೊದಲು ಸರ್ಕಾರವು ಒಡಿಶಾದಿಂದ 36,000 ಕೋಟಿ ರೂಪಾಯಿಗಳ ಭತ್ತವನ್ನು ಎಂಎಸ್‌ಪಿ ಅಡಿಯಲ್ಲಿ ಖರೀದಿಸುತ್ತಿತ್ತು. ಪ್ರಸ್ತುತ ಸರ್ಕಾರವು ರಾಜ್ಯದಿಂದ 1.10 ಲಕ್ಷ ಕೋಟಿ ರೂ. ಮೌಲ್ಯದ ಭತ್ತವನ್ನು ಖರೀದಿಸುತ್ತಿದೆ. ಏಕೆಂದರೆ, ರೈತರ ನಿಜವಾದ ಸಬಲೀಕರಣಕ್ಕಾಗಿ ಬಿಜೆಪಿ ಶ್ರಮಿಸುತ್ತಿದೆ ಎಂದು ತಿಳಿಸಿದರು.