ದಾವಣಗೆರೆ : ಉತ್ತರ ಪ್ರದೇಶದ ಪ್ರಯಾಗ್ರಾಜ್ನ ತ್ರೀವೇಣಿ ಸಂಗಮದಲ್ಲಿ ಕುಂಭಮೇಳ ನಡೆಯುತ್ತಿದೆ. ಈ ಕುಂಭಮೇಳಕ್ಕೆ ದಾವಣಗೆರೆಯ ಶಫೀವುಲ್ಲಾ ಎಂಬುವರು ಧರ್ಮಾತೀತ ಮನೋಭಾವದಿಂದ ಭಾಗಿಯಾಗಿ, ಮಹಾದೇವನನ್ನು ಭಕ್ತಿಯಿಂದ ಆರಾಧಿಸುತ್ತಾ ಭಾವೈಕ್ಯತೆ ಸಾರಿದ್ದಾರೆ.
ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಮದ ನಿವಾಸಿ ಶಫೀವುಲ್ಲಾ ತಮ್ಮ ಸ್ನೇಹಿತರೊಂದಿಗೆ ತೆರಳಿ ಕುಂಭಮೇಳದಲ್ಲಿ ಭಾಗಿಯಾಗಿ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿರುವ ಶಫೀವುಲ್ಲಾ ಅವರು ಬೆಳ್ಳಿಗನೂಡು ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸತತ 18 ವರ್ಷಗಳಿಂದ ಕೆಲಸ ಮಾಡುತ್ತಿರುವ ಶಫೀವುಲ್ಲಾ ಅವರು ಕುಂಭಮೇಳದಲ್ಲಿ ಭಾಗಿಯಾಗಿ ಭಾವೈಕ್ಯತೆ ಸಾರಿದ್ದಾರೆ. ಮುಸ್ಲಿಂ ಆಗಿದ್ದರೂ ಹಿಂಜರಿಯದೆ ಸ್ನೇಹಿತರೊಂದಿಗೆ ಫೆ. 10ಕ್ಕೆ ತೆರಳಿ ಈಗಾಗಲೇ ದಾವಣಗೆರೆಗೆ ಹಿಂದಿರುಗಿದ್ದಾರೆ.
ಕುಂಭಮೇಳಕ್ಕೆ ಹೋಗಿ ಬನ್ನಿ ಎಂದು ಕೈಮುಗಿದು ಮನವಿ : ನಾನು ಮುಸ್ಲಿಂ ಆಗುವ ಮುನ್ನ ಭಾರತೀಯ. ಹಿಂದೂ ಧರ್ಮದ ಮೇಲೆ ಅಪಾರವಾದ ಪ್ರೀತಿ ಇರುವ ಕಾರಣ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿದ್ದೇನೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಭಾವೈಕ್ಯತೆ ಸಾರಿದ್ದೇನೆ. ಪ್ರಯಾಗ್ರಾಜ್ಗೆ ತೆರಳಿ ಅಲ್ಲಿಂದ ಕಾಶಿಗೆ ಭೇಟಿ ನೀಡಿ, ಅಯೋಧ್ಯೆಯ ರಾಮಲಲ್ಲಾನನ್ನು ನೋಡಿಕೊಂಡು ದಾವಣಗೆರೆಗೆ ಆಗಮಿಸಿದ್ದೇನೆ. ನೂರಾರು ವರ್ಷಗಳ ಬಳಿಕ ನಡೆಯುತ್ತಿರುವ ಕುಂಭಮೇಳಕ್ಕೆ ಒಮ್ಮೆಯಾದರೂ ಹೋಗಿ ಪುಣ್ಯಸ್ನಾನ ಮಾಡಿ ಬನ್ನಿ" ಎಂದು ಶಫೀವುಲ್ಲಾ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಹಾ ಕುಂಭಮೇಳ: ಶಿವಮೊಗ್ಗದಿಂದ ಪ್ರಯಾಗ್ರಾಜ್ಗೆ ವಿಶೇಷ ನೇರ ರೈಲು