ಗಂಗಾವತಿ (ಕೊಪ್ಪಳ) : ಸ್ನೇಹಿತರೊಂದಿಗೆ ರಜೆ ಕಳೆಯಲು ಆಗಮಿಸಿದ್ದ ತೆಲಂಗಾಣದ ಖಾಸಗಿ ಆಸ್ಪತ್ರೆಯ ವೈದ್ಯೆ ಅನನ್ಯ ಮೋಹನ್ರಾವ್ ಎಂಬುವರು ತಾಲ್ಲೂಕಿನ ಸಣಾಪುರದ ಸಮೀಪದ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದು, ಅವರ ಶವ ಪತ್ತೆಗಾಗಿ ಸತತ ಹತ್ತು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದರೂ ಅವರ ಸುಳಿವು ಸಿಕ್ಕಿಲ್ಲ.
ಯುವತಿಯ ಮೃತ ದೇಹದ ಪತ್ತೆಗಾಗಿ ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ ಏಳು ಗಂಟೆವರೆಗೂ ಸತತ ಹತ್ತು ತಾಸುಗಳ ನಿರಂತರ ಶೋಧ ನಡೆಸಿದರು. ಆದರೆ, ಯಾವುದೇ ಸುಳಿವು ದೊರೆತಿಲ್ಲ.
ಸಂಜೆಯಾದ ಬಳಿಕ ಕತ್ತಲು ಕವಿದಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿ ಶೋಧ ಕಾರ್ಯ ಸ್ಥಗಿತಗೊಳಿಸಲಾಯಿತು. ಮತ್ತೆ ಗುರುವಾರ ಶೋಧ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ದ್ರೋಣ್ ಕ್ಯಾಮರಾದಿಂದ ಹುಡುಕಾಟ ನಡೆಸಲಾಗುವುದು. ಬಳಿಕ ಮುಳುಗು ತಜ್ಞರನ್ನು ಹೊರ ಜಿಲ್ಲೆಯಿಂದ ಕರೆಯಿಸಿ ಶೋಧ ಕಾರ್ಯ ಮಾಡಲಾಗುಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಸೋಮಶೇಖರ್ ಜುಟ್ಟಾಲ್ ಸೇರಿದಂತೆ ಗಂಗಾವತಿ, ಕೊಪ್ಪಳದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಅನನ್ಯ ಅವರು ಹೈದರಾಬಾದ್ನ ವಿಕೆಸಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. ರಜೆ ಕಳೆಯಲು ತಮ್ಮ ಸ್ನೇಹಿತರಾದ ಅಶಿತಾ ಮತ್ತು ಸಾತ್ವಿಕ್ ಜೊತೆ ಸಣಾಪುರ ಸಮೀಪದ ಖಾಸಗಿ ಗೆಸ್ಟ್ಹೌಸ್ಗೆ ಮಂಗಳವಾರ ಸಂಜೆ ಬಂದಿಳಿದಿದ್ದರು.
ಈ ಗೆಸ್ಟ್ ಹೌಸ್ ಹಿಂದೆ ಇರುವ ತುಂಗಭದ್ರಾ ನದಿಯಲ್ಲಿ ಈ ಮೂವರು ಈಜಲು ಹೋಗಿದ್ದರು. ಈ ಪೈಕಿ ಅನನ್ಯ, ನದಿಯಲ್ಲಿ ಈಜಲು ಸಮೀಪದ ಬಂಡೆಯೊಂದರ ಮೇಲಿಂದ ನೀರಿಗೆ ಜಿಗಿದಿದ್ದಾರೆ. ನದಿಯಲ್ಲಿನ ನೀರಿನ ಸೆಳೆತದಿಂದ ಕೊಚ್ಚಿ ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಲ್ಲು ಬಂಡೆಯ ಮೇಲಿಂದ ವೈದ್ಯೆ ಜಿಗಿಯುವ ಕೊನೆಯ ಕ್ಷಣದ ದೃಶ್ಯಾವಳಿ ಅವರ ಸ್ನೇಹಿತನ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ : ಹಾವೇರಿ: ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು