ನವದೆಹಲಿ:ಜಿ7 ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರ ಇಟಲಿಗೆ ಭೇಟಿ ನೀಡಲಿದ್ದಾರೆ. ಇದು ಸತತ ಮೂರನೇ ಅವಧಿಗೆ ದೇಶದ ಚುಕ್ಕಾಣಿ ಹಿಡಿದ ಬಳಿಕದ ಮೊದಲ ವಿದೇಶ ಪ್ರವಾಸವಾಗಲಿದೆ.
ಜೂನ್ 13 ರಿಂದ 15 ರವರೆಗೆ ಇಟಲಿಯ ಅಪುಲಿಯಾದಲ್ಲಿ ಜಿ 7 ಶೃಂಗಸಭೆಯ ಆಯೋಜಿಸಲಾಗಿದೆ. ಇದಕ್ಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಕೋರಿಕೆಯ ಮೇರೆಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿದಂತೆ ಹಲವು ಗಣ್ಯರ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ರಷ್ಯಾ ದಾಳಿಗೆ ತುತ್ತಾಗಿರುವ ಉಕ್ರೇನ್ ಮೇಲೆ ಯುದ್ಧ ನಿಲ್ಲಿಸಲು ಆಗ್ರಹಿಸುತ್ತಿರುವ ಆ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲನ್ಸ್ಕಿ ಅವರು ಕೂಡ ಸಭೆಗೆ ಹಾಜರಾಗಲಿದ್ದಾರೆ.
ದಿನಾಂಕ ನಿಗದಿ ಆಗಿಲ್ಲ:ಇಟಲಿಗೆ ಭೇಟಿ ನೀಡುವ ಪ್ರಧಾನಿ ಮೋದಿ ಅವರ ಪ್ರವಾಸದ ಬಗ್ಗೆ ದಿನಾಂಕ ನಿಗದಿಯಾಗಿಲ್ಲ. ಜೂನ್ 13 ರಂದು ಅಲ್ಲಿಗೆ ತೆರಳಿ ಜೂನ್ 14 ರಂದು ವಾಪಸ್ ಆಗಲಿದ್ದಾರೆ ಎಂದು ಉನ್ನತಾಧಿಕಾರಿಗಳ ಮಾಹಿತಿಯಾಗಿದೆ. ಆದರೆ, ಈ ಬಗ್ಗೆ ಪ್ರಧಾನಿ ಕಚೇರಿ ಶೀಘ್ರವೇ ಪ್ರಕಟಣೆ ಹೊರಡಿಸಲಿದೆ. ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೋದಿ ಅವರ ಮೊದಲ ವಿದೇಶ ಪ್ರವಾಸ ಇದಾಗಲಿದೆ.