ನವದೆಹಲಿ: ಬಿಹಾರದ ರಾಜ್‌ಗಿರ್‌ನಲ್ಲಿ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉದ್ಘಾಟಿಸಲಿದ್ದಾರೆ. ಪಿಎಂಒ ನೀಡಿರುವ ಪ್ರಕಟಣೆಯ ಪ್ರಕಾರ, ಪ್ರಧಾನಿ ಅವರು ಬೆಳಗ್ಗೆ 9.45 ರ ಸುಮಾರಿಗೆ ನಳಂದಕ್ಕೆ ಭೇಟಿ ನೀಡಲಿದ್ದಾರೆ. ನಳಂದದ ಪುರತಾನ ವಿವಿ ಸೈಟ್ ಅನ್ನು 2016 ರಲ್ಲಿ ವಿಶ್ವಸಂಸ್ಥೆ ಹೆರಿಟೇಜ್ ಸೈಟ್ ಎಂದು ಘೋಷಣೆ ಮಾಡಲಾಗಿತ್ತು.
ಬೆಳಗ್ಗೆ 10.30ರ ಸುಮಾರಿಗೆ ಪ್ರಧಾನಿ ಮೋದಿ ನಳಂದ ನೂತನ ಕ್ಯಾಂಪಸ್ ಉದ್ಘಾಟಿಸುವರು. ಈ ಸಂದರ್ಭದಲ್ಲಿ ನಡೆಯುವ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ 17 ದೇಶಗಳ ಮಿಷನ್ ಮುಖ್ಯಸ್ಥರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಹೊಸ ಕ್ಯಾಂಪಸ್‌ನಲ್ಲಿ ಏನೇನೆಲ್ಲ ಸೌಲಭ್ಯಗಳಿವೆ: ಕ್ಯಾಂಪಸ್‌ನಲ್ಲಿ 40 ಕೊಠಡಿಗಳೊಂದಿಗೆ ಎರಡು ಶೈಕ್ಷಣಿಕ ಬ್ಲಾಕ್‌ಗಳನ್ನ ನಿರ್ಮಾಣ ಮಾಡಲಾಗಿದೆ. ಒಟ್ಟು 1900 ಆಸನಗಳ ಸಾಮರ್ಥ್ಯವಿದೆ. ಇದು ತಲಾ 300 ಆಸನಗಳ ಸಾಮರ್ಥ್ಯದ ಎರಡು ಸಭಾಂಗಣಗಳನ್ನು ಹೊಂದಿದೆ. ಸುಮಾರು 550 ವಿದ್ಯಾರ್ಥಿಗಳು ಇರುವ ಸಾಮರ್ಥ್ಯದ ಹಾಸ್ಟೆಲ್ ಅನ್ನು ಹೊಂದಿದೆ. ಅಂತಾರಾಷ್ಟ್ರೀಯ ಕೇಂದ್ರ, 2000 ವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವ ಆಂಫಿಥಿಯೇಟರ್, ಅಧ್ಯಾಪಕರ ಕ್ಲಬ್ ಮತ್ತು ಕ್ರೀಡಾ ಸಂಕೀರ್ಣ ಸೇರಿದಂತೆ ಹಲವಾರು ಇತರ ಸೌಲಭ್ಯಗಳನ್ನು ಹೊಂದಿದೆ.