ನವದೆಹಲಿ: ಲೋಕಸಭೆಯಲ್ಲಿ ನಾಳೆ (ಫೆಬ್ರುವರಿ 01) ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಚುನಾವಣೆಯ ಬಳಿಕ ಪೂರ್ಣ ಬಜೆಟ್ ಮಂಡಿಸುವ ಸಂಪ್ರದಾಯವನ್ನು ನಾವು ಅನುಸರಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಹೊಸ ಸಂಸತ್ ಭವನದ ಹೊರಭಾಗದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಾರ್ಗದರ್ಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ ಎಂದರು.
ಹೊಸ ಸರ್ಕಾರ ರಚನೆಯಾದ ಬಳಿಕ ಸಂಪೂರ್ಣ ಬಜೆಟ್ ಮಂಡಿಸಲಾಗುತ್ತದೆ. ಈ ಬಜೆಟ್ ಒಂದು ರೀತಿ ಸ್ತ್ರೀ ಶಕ್ತಿಯ ಸಾಕ್ಷಾತ್ಕಾರದ ಹಬ್ಬವಾಗಿರಲಿದೆ. ಹೊಸ ಸಂಸತ್ತಿನ ಕಟ್ಟಡದಲ್ಲಿ ಕರೆದ ಮೊದಲ ಅಧಿವೇಶನದ ಕೊನೆಯಲ್ಲಿ, ಸಂಸತ್ತು ನಾರಿ ಶಕ್ತಿ ವಂದನ್ ಅಧಿನಿಯಮ್ ಅಡಿ ಸ್ತ್ರೀಯರ ಬಗ್ಗೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತ್ತು. ಮಹಿಳೆಯರಿಗೆ ಲೋಕಸಭೆ, ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಮಸೂದೆ ರಾಷ್ಟ್ರಪತಿಗಳ ಅಂಕಿತ ಪಡೆದು ಕಾಯ್ದೆಯಾಗಿದೆ. ಅಷ್ಟೇ ಅಲ್ಲದೇ, ಜನವರಿ 26ರಂದು ದೇಶವು ಸ್ತ್ರೀ ಶಕ್ತಿ, ಸಾಮರ್ಥ್ಯ, ಶೌರ್ಯವನ್ನು ಹೇಗೆ ಪ್ರದರ್ಶಿಸಿತು ಎಂಬುದನ್ನು ನಾವು ನೋಡಿದ್ದೇವೆ. ಇದೆಲ್ಲವನ್ನೂ ಗಮನಿಸುತ್ತಿದ್ದರೆ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಾರ್ಗದರ್ಶನ ಮತ್ತು ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಮಧ್ಯಂತರ ಬಜೆಟ್ ಒಂದು ರೀತಿಯಲ್ಲಿ ನಾರಿಶಕ್ತಿಯ ಹಬ್ಬವಾಗಲಿದೆ ಎಂದು ಪ್ರಧಾನಿ ಬಣ್ಣಿಸಿದರು.