ನವದೆಹಲಿ: "ನಮ್ಮ ಸರ್ಕಾರ ದೇಶದ ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದರು.
ಸರ್ಕಾರದ ಸಾಧನೆಗಳ ಕುರಿತು ಸುದೀರ್ಘ ಭಾಷಣ ಮಾಡಿದ ಅವರು, ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆಮ್ ಆದ್ಮಿ ಪಕ್ಷ, ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
'ನಾವು ಶೀಶ್ ಮಹಲ್ ಕಟ್ಟಲು ಹಣ ಬಳಸಿಲ್ಲ': "ನಮ್ಮ ಸರ್ಕಾರ ಅನೇಕ ಯೋಜನೆಗಳಲ್ಲಿ ಪೋಲಾಗುತ್ತಿದ್ದ ಅಪಾರ ಪ್ರಮಾಣದ ಹಣ ಉಳಿಸಿದೆ. ಆ ಹಣವನ್ನು ನಾವು ಶೀಶ್ ಮಹಲ್ ಕಟ್ಟಲು ಬಳಸಿಲ್ಲ" ಎಂದು ಕೇಜ್ರಿವಾಲ್ ಅವರಿಗೆ ಪರೋಕ್ಷ ಟಾಂಗ್ ಕೊಟ್ಟರು. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಂಗಲೆ ಪುನರ್‌ನಿರ್ಮಾಣದ ವಿಚಾರವನ್ನು ಪರೋಕ್ಷವಾಗಿ ಮೋದಿ ಪ್ರಸ್ತಾಪಿಸಿದರು. "ನಾವು ಸುಳ್ಳು ಭರವಸೆಗಳನ್ನು ನೀಡಿಲ್ಲ. ವಾಸ್ತವವಾಗಿ ಜನರ ಅಭಿವೃದ್ಧಿ ಮಾಡಿದ್ದೇವೆ" ಎಂದು ತಿಳಿಸಿದರು.
SC, ST, OBCಗೆ ಮೆಡಿಕಲ್ ಸೀಟು ಹೆಚ್ಚಳ: "ದೇಶದಲ್ಲಿ ಸದ್ಯ 780 ಮೆಡಿಕಲ್ ಕಾಲೇಜುಗಳಿವೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗಾಗಿ ಮೆಡಿಕಲ್ ಸೀಟುಗಳನ್ನು ಹೆಚ್ಚಿಸಲಾಗಿದೆ" ಎಂದು ಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಟೀಕಾಸ್ತ್ರ ಪ್ರಯೋಗ: "ಕೆಲವರು ವಿದೇಶಾಂಗ ನೀತಿ ಬಗ್ಗೆ ಪದೇ ಪದೇ ಮಾತನಾಡುತ್ತಿರುತ್ತಾರೆ. ಅವರು ಹೀಗೆ ಮಾತನಾಡುವುದರಿಂದ ದೇಶಕ್ಕಾಗುವ ತೊಂದರೆಗಳ ಕುರಿತು ಯೋಚಿಸುವುದಿಲ್ಲ. ಅವರ ಮಾತುಗಳು ಅರ್ಬನ್ ನಕ್ಸಲರಂತಿದೆ" ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕಾಸಮರ ನಡೆಸಿದರು.