ನವದೆಹಲಿ: ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಭಾರಿ ಕಾಲ್ತುಳಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಗಾಯಾಳುಗಳ ನೆರವಿಗೆ ತಕ್ಷಣ ಧಾವಿಸುವಂತೆ ಹಾಗೂ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಸೂಚಿಸಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಕಚೇರಿಯ ಮಾಹಿತಿ ಪ್ರಕಾರ, ಪ್ರಧಾನಿ ನಿರಂತರವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಎರಡು ಬಾರಿ ಸಿಎಂಗೆ ಕರೆ ಮಾಡಿದ್ದಾರೆ. ಅಲ್ಲಿನ ಬೆಳವಣಿಗೆ ಮತ್ತು ಪರಿಹಾರ ಕ್ರಮದ ಕುರಿತು ವಿವರ ಪಡೆದಿದ್ದಾರೆ.
ತಡರಾತ್ರಿ ತ್ರಿವೇಣಿ ಸಂಗಮದಲ್ಲಿ ಅಪಾರ ಪ್ರಮಾಣದ ಭಕ್ತರು ಪವಿತ್ರ ಸ್ನಾನ ಮಾಡಲು ಮುಂದಾದಾಗ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾವಿರಾರು ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಪರಿಣಾಮ, ಕೆಲವರು ನಾಪತ್ತೆಯಾಗಿದ್ದು, ಮತ್ತೆ ಕೆಲವರಿಗೆ ಗಾಯಗಳಾಗಿವೆ.
ಇಂದಿನ ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಅಮೃತ್ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಪ್ರಯಾಗ್ರಾಜ್ಗೆ ಆಗಮಿಸಿದ್ದಾರೆ.
ಉನ್ನತ ಮಟ್ಟದ ಸಭೆ ನಡೆಸಿದ ಯೋಗಿ: ಕಾಲ್ತುಳಿತ ಪರಿಸ್ಥಿತಿ ಕುರಿತು ವರದಿಯಾಗುತ್ತಿದ್ದಂತೆ ಸಿಎಂ ಯೋಗಿ ಆದಿತ್ಯನಾಥ್ ಅವರು ಈ ಕುರಿತು ನಿರಂತರ ಮಾಹಿತಿ ಪಡೆಯುತ್ತಿದ್ದಾರೆ. ಪರಿಸ್ಥಿತಿ ನಿರ್ವಹಣೆಗೆ ವಾರ್ ರೂಂ ಸ್ಥಾಪಿಸಿದ್ದು ಮುಖ್ಯ ಕಾರ್ಯದರ್ಶಿ, ಡಿಜಿಪಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಎಂ ಕಚೇರಿ ಅಧಿಕಾರಿಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಇದರಲ್ಲಿದ್ದಾರೆ.
ಇಂದು ಮುಂಜಾನೆ 4 ಗಂಟೆಯಿಂದಲೇ ಸಿಎಂ, ಪ್ರಮುಖ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ತತ್ಕ್ಷಣದ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಮನವಿ: ಭಕ್ತರಿಗೂ ಮನವಿ ಮಾಡಿರುವ ಸಿಎಂ ಯೋಗಿ, ಸಂಗಮ ಘಾಟ್ನಲ್ಲಿ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಆಡಳಿತಾಧಿಕಾರಿಗಳೊಂದಿಗೆ ಸಹಕರಿಸಿ. ಯಾವುದೇ ಗಾಳಿ ಮಾತಿಗೆ ಕಿವಿಗೊಡಬೇಡಿ. ಸ್ನಾನ ಮಾಡಲು ಅನೇಕ ಘಾಟ್ಗಳಿವೆ. ಒಂದೇ ಘಾಟ್ನಲ್ಲಿ ಜನರು ಹೆಚ್ಚು ಸೇರಬಾರದು. ಅಲ್ಲಿನ ನಿಯಮಗಳನ್ನು ಪಾಲಿಸಬೇಕು. ಆದೇಶ ಪಾಲನೆ ಮತ್ತು ಸುರಕ್ಷತೆ ನಿರ್ವಹಣೆಗೆ ನಿಮ್ಮ ಸಹಕಾರ ಅತ್ಯಗತ್ಯ ಎಂದು ತಿಳಿಸಿದ್ದಾರೆ.
ಅಮೃತ್ ಸ್ನಾನ ರದ್ದುಗಳಿಸಿದ ಅಖಾರ ಪರಿಷದ್: ಕಾಲ್ತುಳಿತ ಸಂಭವಿಸಿದ ಬೆನ್ನಲ್ಲೇ ಅಖಿಲ ಭಾರತೀಯ ಅಖಾರ ಪರಿಷದ್ ಅಧ್ಯಕ್ಷರಾದ ಮಹಂತ್ ರವಿಂದ್ರ ಪುರಿ ಮೌನಿ ಅಮಾವಾಸ್ಯೆಯ ಮಹಾಸ್ನಾನ ರದ್ದು ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಏನಾಯಿತು ಎಂಬುದನ್ನು ನೋಡಿದ್ದೀರಿ. ನಾವು ಎಲ್ಲಾ ಸಂತರು ಸ್ನಾನ ಮಾಡಲು ಸಿದ್ದವಾದಾಗ ಈ ಘಟನೆ ವರದಿಯಾಯಿತು. ನಾವು ಸ್ನಾನವನ್ನು ರದ್ದು ಮಾಡಿದ್ದೇವೆ. ಇದೀಗ ಮೌನಿ ಅಮಾವಾಸ್ಯೆ ಸ್ನಾನವನ್ನೂ ರದ್ದು ಮಾಡುತ್ತಿದ್ದೇವೆ. ಕುಂಭ ಮೇಳ ಸಂಪ್ರದಾಯದ ಪ್ರಕಾರ ಸನ್ಯಾಸಿಗಳು, ಬೈರಾಗಿಗಳು ಸಂಗಮ್ ಘಾಟ್ನಲ್ಲಿ ನಿಯಮಾನುಸಾರ ಮೆರವಣಿಗೆ ನಡೆಸಿ ಸ್ನಾನ ಮಾಡುತ್ತಾರೆ. ಮೌನಿ ಅಮಾವಾಸ್ಯೆಯನ್ನು ತ್ರಿವೇಣಿ ಸಂಗಮದ ಸ್ನಾನಕ್ಕೆ ಅತ್ಯಂತ ಪವಿತ್ರ ದಿನ ಎಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗುತ್ತದೆ. ಆದರೆ, ಇದೀಗ ಇದನ್ನು ನಾವು ರದ್ದು ಮಾಡಿದ್ದೇವೆ ಎಂದರು.
ಮಂಗಳವಾರ ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ 5 ಕೋಟಿ ಜನರು ಮೇಳಕ್ಕೆ ಆಗಮಿಸಿದ್ದು, ಇಂದು 10 ಕೋಟಿ ಜನರು ಸ್ನಾನ ಕೈಗೊಳ್ಳಬಹುದು ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿತ್ತು. ಇದಕ್ಕಾಗಿ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಪ್ರಯಾಗ್ರಾಜ್ನಿಂದ ಲಕ್ನೋಗೆ ಪರೀಕ್ಷಾ ಕೇಂದ್ರ ಬದಲಾವಣೆ: ಫೆ.1 ಮತ್ತು 2ರಂದು ನಿಗದಿಯಾಗಿದ್ದ ಐಐಟಿಯ ಗೇಟ್ ಮತ್ತು ಜೆಎಂ ಪರೀಕ್ಷಾ ಕೇಂದ್ರಗಳನ್ನು ಪ್ರಯಾಗ್ರಾಜ್ ಬದಲಾಗಿ ಲಕ್ನೋದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಈ ಕುರಿತು ಸೂಚನೆ ಹೊರಡಿಸಿರುವ ಗೇಟ್ ಪರೀಕ್ಷೆ ನಡೆಸುವ ಐಐಟಿ ರೋರ್ಕಿ ಮತ್ತು ಜೆಎಎಂ ಪರೀಕ್ಷೆ ನಡೆಸುವ ಐಐಟಿ ದೆಹಲಿ, ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ತಲುಪುವ ಸವಾಲು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳನ್ನು ಇದೇ ದಿನ ಲಕ್ನೋಗೆ ಸ್ಥಳಾಂತರಿಸಲಾಗುವುದು. ಪ್ರಯಾಗ್ರಾಜ್ ಅಭ್ಯರ್ಥಿಗಳು ಲಕ್ನೋದಲ್ಲಿ ಪರೀಕ್ಷೆ ಬರೆಯುವಂತೆಯೂ ಸೂಚಿಸಿದೆ.
ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ; 17 ಮಂದಿ ಸಾವು ಶಂಕೆ, ಸಂಕಷ್ಟದಲ್ಲಿ ಬೆಳಗಾವಿಯ ಭಕ್ತರು; ಅಮೃತ ಸ್ನಾನ ರದ್ದುಗೊಳಿಸಿದ ಅಖಾರಾಗಳು