ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಯಶಸ್ವಿ ಪರೀಕ್ಷೆಯ ನಂತರ ಭಾರತೀಯ ಸೇನೆಯ ಬಲವು ಮತ್ತಷ್ಟು ಹೆಚ್ಚಿದ್ದು, DRDO ಬಾಹ್ಯಾಕಾಶ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಒಂದು ಹೆಜ್ಜೆ ಇಟ್ಟಿದೆ. ಈ ಯಶಸ್ವಿ ಪರೀಕ್ಷೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಡಿಆರ್‌ಡಿಒಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕ್ಷಿಪಣಿಯನ್ನು ಮಿಷನ್ ದಿವ್ಯಾಸ್ತ್ರದ ಅಡಿಯಲ್ಲಿ DRDO ತಯಾರಿಸಿದೆ.
ಅಗ್ನಿ-5 ರ ವ್ಯಾಪ್ತಿ 7,000 ಕಿ.ಮೀ: ಅಗ್ನಿ-5 ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಮೊದಲು ಈ ಕ್ಷಿಪಣಿಯ ವ್ಯಾಪ್ತಿಯು 5,000 ಕಿ.ಮೀ ವರೆಗೆ ಇತ್ತು, ಆದರೆ ಈಗ ಅದರ ವ್ಯಾಪ್ತಿಯನ್ನು 7,000 ಕಿ.ಮೀ.ವರೆಗೆ ವಿಸ್ತರಿಸಲಾಗಿದೆ.
ಇದು ಖಂಡಾಂತರ ಕ್ಷಿಪಣಿ: ಅಗ್ನಿ-5 ಒಂದು ಖಂಡಾಂತರ ಕ್ಷಿಪಣಿಯಾಗಿದೆ. ಇದು ಹೆಚ್ಚಿನ ವ್ಯಾಪ್ತಿ ಹೊಂದಿರುವ ಕಾರಣದಿಂದಾಗಿ ಪ್ರಪಂಚದ ಅರ್ಧದಷ್ಟು ಭಾಗವನ್ನು ಆವರಿಸುತ್ತದೆ. ಅಗ್ನಿ - 5 ಅನ್ನು ಉಡಾಯಿಸಿದರೆ, ಈ ಕ್ಷಿಪಣಿ ಆಫ್ರಿಕಾದ ಅರ್ಧದಷ್ಟು, ರಷ್ಯಾದ ಭಾಗ, ಆಸ್ಟ್ರೇಲಿಯಾದ ಉತ್ತರ ಭಾಗ ಮತ್ತು ಗ್ರೀನ್‌ಲ್ಯಾಂಡ್ ಅನ್ನು ಸಹ ತಲುಪಬಹುದು. ಮಾಹಿತಿಯ ಪ್ರಕಾರ, ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಡಿಆರ್‌ಡಿಒ ಜಂಟಿ ಪ್ರಯತ್ನದಿಂದ ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ.
1,500 ಕೆಜಿ ಅಣುಬಾಂಬ್ ಹೊತ್ತೊಯ್ಯಬಲ್ಲದು: ಅಗ್ನಿ-5 ತೂಕ ಸುಮಾರು 50 ಸಾವಿರ ಕಿಲೋಗ್ರಾಂಗಳಷ್ಟಿತ್ತು, ಆದರೆ ಅದರ ಮುಂಭಾಗದಲ್ಲಿನ ಉಕ್ಕಿನ ಅಂಶವನ್ನು ತೆಗೆದುಹಾಕಿ ಮತ್ತು ಸಂಯೋಜಿತ ವಸ್ತುವನ್ನು ಬಳಸಿ ಅದರ ತೂಕವನ್ನು ಶೇಕಡಾ 20 ರಷ್ಟು ಕಡಿಮೆ ಮಾಡಿದ್ದರಿಂದ ಈಗ ಅದರ ತೂಕ ಸುಮಾರು 40 ಸಾವಿರ ಕಿಲೋಗ್ರಾಂಗಳಷ್ಟು ಕಡಿಮೆಯಾಗಿದೆ. 17.5 ಮೀಟರ್ ಉದ್ದ ಮತ್ತು ಅದರ ವ್ಯಾಸ 6.7 ಅಡಿ. ಈ ಕ್ಷಿಪಣಿಯಲ್ಲಿ 1,500 ಕೆಜಿ ತೂಕದ ಅಣುಬಾಂಬ್ ಅಳವಡಿಸಬಹುದಾಗಿದೆ.