ಪ್ರಯಾಗ್ರಾಜ್(ಉತ್ತರ ಪ್ರದೇಶ): ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾದ ಸಾವು ನೋವಿಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಗಾಯಾಳುಗಳು ಶೀಘ್ರ ಚೇತರಿಕೆ ಕಾಣಲಿ ಎಂದು ಹಾರೈಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಯಾಗ್ರಾಜ್ ಮಹಾಕುಂಭದಲ್ಲಿ ನಡೆದ ಅವಘಡ ಬೇಸರದ ಸಂಗತಿ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡವರ ಶೀಘ್ರ ಚೇತರಿಕೆಗೆ ಹಾರೈಸುತ್ತೇನೆ. ಸಂತ್ರಸ್ತರಿಗೆ ಎಲ್ಲಾ ರೀತಿಯ ಸಹಾಯಕ್ಕೆ ಸ್ಥಳೀಯ ಆಡಳಿತ ಮುಂದಾಗಿದೆ. ಈ ಕುರಿತು ಸಿಎಂ ಯೋಗಿ ಅವರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಕಾಲ್ತುಳಿತದ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಕೇಂದ್ರದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ.
ರಾಹುಲ್ ಗಾಂಧಿ ಟೀಕೆ: ಕಾಲ್ತುಳಿತ ಘಟನೆಗೆ ವಿಷಾದ ವ್ಯಕ್ತಪಡಿಸಿ ಪ್ರತಿಕ್ರಿಯಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಿಐಪಿಗಳಿಗೆ ಹೆಚ್ಚಿನ ಗಮನ ನೀಡಿ, ಸಾಮಾನ್ಯ ಭಕ್ತರ ನಿರ್ಲಕ್ಷ್ಯಿಸಿದ್ದೇ ಘಟನೆಗೆ ಕಾರಣ ಎಂದು ಟೀಕಿಸಿದ್ದಾರೆ.