ಪಿಲಿಭಿತ್ (ಉತ್ತರ ಪ್ರದೇಶ):ಗುರುದಾಸ್‌ಪುರ ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ದಾಳಿ ನಡೆಸಿದ ಆರೋಪ ಹೊತ್ತಿದ್ದ ಮೂವರು ಖಲಿಸ್ತಾನಿ ಭಯೋತ್ಪಾದಕರು ಗುಂಡಿಗೆ ಬಲಿಯಾಗಿದ್ದಾರೆ. ಸೋಮವಾರ ಬೆಳಗ್ಗೆ ಪಿಲಿಭಿತ್‌ನಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರು ಹತರಾಗಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ.
ಗುರುದಾಸ್‌ಪುರ ನಿವಾಸಿಗಳಾದ ಗುರ್ವಿಂದರ್ ಸಿಂಗ್ (25), ವೀರೇಂದ್ರ ಸಿಂಗ್ ಅಲಿಯಾಸ್ ರವಿ (23) ಮತ್ತು ಜಸ್‌ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ (18) ಮೃತ ಖಲಿಸ್ತಾನಿ ಭಯೋತ್ಪಾದಕರು. ಮೃತರು ಪಾಕಿಸ್ತಾನ ಪ್ರಾಯೋಜಿತ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (KZF) ಭಯೋತ್ಪಾದಕ ಘಟಕದೊಂದಿಗೆ ಸಂಬಂಧ ಹೊಂದಿದ್ದರು ಎಂದು ಉತ್ತರ ಪ್ರದೇಶದ ಡಿಜಿಪಿ ಪ್ರಶಾಂತ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಹತರಾದವರು ಪಾಕ್ನ ಖಲಿಸ್ತಾನಿ ಕಮಾಂಡೋ ಫೋರ್ಸ್‌ಗೆ ಸೇರಿದವರಾಗಿದ್ದು, ಈ ಮೂವರೂ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ಗ್ರೆನೇಡ್‌ನಿಂದ ದಾಳಿ ನಡೆಸಿದ್ದರು. ಮೃತ ಖಲಿಸ್ತಾನಿ ಭಯೋತ್ಪಾದಕರಿಂದ ಎರಡು ಬೈಕ್, ಎರಡು ಎಕೆ - 47 ರೈಫಲ್‌ಗಳು, ಎರಡು ಗ್ಲೋಕ್ ಪಿಸ್ತೂಲ್‌ಗಳು ಮತ್ತು ಅಪಾರ ಪ್ರಮಾಣದ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖಾಲಿಸ್ತಾನಿ ಉಗ್ರರಿಂದ ವಶಪಡಿಸಿಕೊಂಡ ರೈಫಲ್‌ಗಳು (ETV Bharat) ''ಪಿಲಿಭಿತ್ ಜಿಲ್ಲೆಯ ಪುರನ್‌ಪುರ ಪ್ರದೇಶದಲ್ಲಿ ಬೆಳಗಿನ ಜಾವ ಈ ಎನ್‌ಕೌಂಟರ್ ನಡೆದಿದ್ದು, ಎನ್‌ಕೌಂಟರ್‌ನಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರು ಹತರಾಗಿದ್ದಾರೆ. ಈ ಮೂವರು ಉಗ್ರರು ಜಿಲ್ಲೆಯಲ್ಲಿ ಅಡಗಿರುವ ಬಗ್ಗೆ ಪಂಜಾಬ್ ಪೊಲೀಸರು ಉತ್ತರ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮೂವರೂ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಪೊಲೀಸ್ ಪೋಸ್ಟ್ ಮೇಲೆ ದಾಳಿ ನಡೆಸಿದ್ದರು. ಅವರನ್ನು ಸೆರೆ ಹಿಡಿಯುವ ಸಲುವಾಗಿ ಸುತ್ತುವರೆಯಲಾಗಿತ್ತು. ಆದರೆ, ಅನುಮಾನ ಬಂದಿದ್ದರಿಂದ ಮೂವರು ಬೈಕ್ ಏರಿ ಪರಾರಿಯಾಗಲು ಪ್ರಯತ್ನಿಸಿದರು. ಈ ವೇಳೆ ಬೈಕ್ ನಿಲ್ಲಿಸಲು ಕೇಳಿದಾಗ, ಅವರು ಗುಂಡಿನ ದಾಳಿ ನಡೆಸಿದರು. ಪ್ರತೀಕಾರವಾಗಿ ನಾವು ಗುಂಡಿನ ದಾಳಿ ನಡೆಸಿದೆವು. ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು'' ಪಿಲಿಭಿತ್ನ ಪೊಲೀಸ್ ಅಧೀಕ್ಷಕ ಅವಿನಾಶ್ ಪಾಂಡೆ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ (ETV Bharat) ಗುಂಡಿನ ದಾಳಿಯಲ್ಲಿ ಸುಮಿತ್ ಮತ್ತು ಶಹನವಾಜ್ ಎಂಬ ಇಬ್ಬರು ಕಾನ್ಸ್ಟೇಬಲ್ಗಳು ಗಾಯಗೊಂಡಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಅವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ (ETV Bharat) ಇದನ್ನೂ ಓದಿ: ದೆಹಲಿಯಲ್ಲಿ 175 ಬಾಂಗ್ಲಾದ ಅಕ್ರಮ ವಲಸಿಗರು ಪತ್ತೆ: ರಾಷ್ಟ್ರ ರಾಜಧಾನಿಯಲ್ಲಿ 1500 ಮಂದಿ ನೆಲೆಸಿರುವ ಶಂಕೆ - ILLEGAL BANGLADESHI IMMIGRANTS