ಕರ್ನಾಟಕ

karnataka

ETV Bharat / bharat

ವೈದ್ಯರು ಔಷಧಗಳ ಸೈಡ್​ ಎಫೆಕ್ಟ್​ ತಿಳಿಸುವುದನ್ನು ಕಡ್ಡಾಯಗೊಳಿಸಬೇಕೆಂದು ಕೋರಿದ್ದ ಪಿಐಎಲ್ ವಜಾ - Medicine Side Effects - MEDICINE SIDE EFFECTS

ವೈದ್ಯರು ತಾವು ಬರೆದುಕೊಡುವ ಔಷಧಗಳ ಅಡ್ಡಪರಿಣಾಮಗಳ ಬಗ್ಗೆ ಕೂಡ ಲಿಖಿತವಾಗಿ ತಿಳಿಸುವುದನ್ನು ಕಡ್ಡಾಯಗೊಳಿಸಬೇಕೆಂದು ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್​ ವಜಾ ಮಾಡಿದೆ.

ವೈದ್ಯರು ಔಷಧಿಗಳ ಸೈಡ್​ ಎಫೆಕ್ಟ್​ ತಿಳಿಸುವುದನ್ನು ಕಡ್ಡಾಯಗೊಳಿಸಬೇಕೆಂದು ಕೋರಿದ್ದ ಪಿಐಎಲ್ ವಜಾ
ವೈದ್ಯರು ಔಷಧಿಗಳ ಸೈಡ್​ ಎಫೆಕ್ಟ್​ ತಿಳಿಸುವುದನ್ನು ಕಡ್ಡಾಯಗೊಳಿಸಬೇಕೆಂದು ಕೋರಿದ್ದ ಪಿಐಎಲ್ ವಜಾ (ians)

By ETV Bharat Karnataka Team

Published : May 20, 2024, 7:01 PM IST

ನವದೆಹಲಿ: ಎಲ್ಲಾ ವೃತ್ತಿಪರ ವೈದ್ಯರು ತಾವು ಬರೆದುಕೊಡುವ ಔಷಧಗಳಿಂದ ಯಾವೆಲ್ಲ ಸಂಭಾವ್ಯ ಅಪಾಯಗಳು ಮತ್ತು ಅಡ್ಡಪರಿಣಾಮಗಳು ಉಂಟಾಗಬಹುದು ಎಂಬುದನ್ನು ವಿವರಿಸುವ ಪ್ರತ್ಯೇಕ ಚೀಟಿಯನ್ನು ರೋಗಿಗಳಿಗೆ ನೀಡುವುದನ್ನು ಕಡ್ಡಾಯಗೊಳಿಸಬೇಕೆಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದಿಲ್ಲಿ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ನ್ಯಾಯಪೀಠವು, ಔಷಧ ತಯಾರಕರು ಮತ್ತು ಫಾರ್ಮಾಸಿಸ್ಟ್​ಗಳಿಗೆ ಸರ್ಕಾರವು ತನ್ನ ವಿವೇಚನೆಯಿಂದ ಇಂಥದೊಂದು ನಿಯಮವನ್ನು ಕಡ್ಡಾಯಗೊಳಿಸಿರುವುದರಿಂದ, ಪಿಐಎಲ್​ನಲ್ಲಿ ಕೋರಿದಂತೆ ನಿರ್ದೇಶನ ನೀಡಿದರೆ ಅದು ನ್ಯಾಯಾಂಗವೇ ಶಾಸನ ಮಾಡಿದಂತಾಗುತ್ತದೆ ಎಂದು ಹೇಳಿತು.

"ಈ ವಿಷಯದಲ್ಲಿ ಯಾವುದೇ ಕಾನೂನಾತ್ಮಕ ಸಮಸ್ಯೆ ಇಲ್ಲ ಎಂದು ಒಪ್ಪಿಕೊಳ್ಳಲಾಗಿದ್ದು, ಅರ್ಜಿಯಲ್ಲಿ ಕೋರಲಾದ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ. ಅದರಂತೆ, ಅರ್ಜಿಗಳೊಂದಿಗೆ ಪ್ರಸ್ತುತ ಪಿಐಎಲ್ ಅನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರನ್ನೂ ಒಳಗೊಂಡ ನ್ಯಾಯಪೀಠ ಆದೇಶಿಸಿದೆ.

ರೋಗಿಯು ಸೂಕ್ತ ನಿರ್ಧಾರ ಕೈಗೊಳ್ಳಬೇಕಾದರೆ ಸೂಕ್ತ ಮಾಹಿತಿಯೂ ಬೇಕಾಗುತ್ತದೆ. ರೋಗಿಯು ಈ ವಿಷಯದಲ್ಲಿ ಆಯ್ಕೆಯ ಹಕ್ಕು ಹೊಂದಿರುತ್ತಾನೆ. ಹೀಗಾಗಿ ವೈದ್ಯರು ತಾವು ಶಿಫಾರಸು ಮಾಡುವ ಔಷಧಗಳ ಸಂಭಾವ್ಯ ಅಪಾಯ ಮತ್ತು ಅಡ್ಡಪರಿಣಾಮಗಳನ್ನು ರೋಗಿಗೆ ತಿಳಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಸ್ತುತ ಔಷಧಿಗಳ ಸಂಭಾವ್ಯ ಅಪಾಯ ಮತ್ತು ಅಡ್ಡಪರಿಣಾಮಗಳನ್ನು ತಿಳಿಸುವ ಜವಾಬ್ದಾರಿ ಔಷಧ ತಯಾರಕರು ಮತ್ತು ಫಾರ್ಮಾಸಿಸ್ಟ್​ಗಳ ಮೇಲಿದೆ. ಆದರೆ ಔಷಧವನ್ನು ಬರೆದುಕೊಡುವ ವೈದ್ಯರೇ ಪ್ರಾದೇಶಿಕ ಭಾಷೆಯಲ್ಲಿ ಇದನ್ನು ರೋಗಿಗಳಿಗೆ ತಿಳಿಸುವಂತಾಗಬೇಕು ಎಂದು ಪಿಐಎಲ್​ನಲ್ಲಿ ಕೋರಲಾಗಿದೆ.

ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ, 1945 ಮತ್ತು ಫಾರ್ಮಸಿ ಪ್ರಾಕ್ಟೀಸ್ ರೆಗ್ಯುಲೇಷನ್ಸ್, 2015ರ ಪ್ರಕಾರ ಔಷಧಿಗಳ ಅಪಾಯವನ್ನು ರೋಗಿಗೆ ಸರಿಯಾಗಿ ತಿಳಿಸುವುದನ್ನು ಈಗಾಗಲೇ ಖಚಿತಪಡಿಸುತ್ತದೆ ಎಂದು ಕೇಂದ್ರ ಸರ್ಕಾರ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ. ಅಲ್ಲದೆ ಅರ್ಜಿದಾರರು ಕೋರಿದಂತೆ ನಿರ್ದೇಶನ ನೀಡಿದಲ್ಲಿ ಅದು ರೋಗಿಗಳಿಗೆ ಸಿಗುವ ವೈದ್ಯಕೀಯ ಸೇವೆಯನ್ನು ಸುಗಮಗೊಳಿಸುವ ಬದಲು ಇನ್ನಷ್ಟು ಕ್ಲಿಷ್ಟಕರವಾಗಿಸುತ್ತದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ವಾದ ವಿವಾದ ಆಲಿಸಿದ ದೆಹಲಿ ಹೈಕೋರ್ಟ್​ನ ನ್ಯಾಯಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತು.

ಹೊಟ್ಟೆ ನೋವು, ಬಾಯಿ ಒಣಗುವುದು ಮತ್ತು ಮಂಪರು ಇವು ಔಷಧದಿಂದ ಉಂಟಾಗುವ ಸಾಮಾನ್ಯ ಅಡ್ಡಪರಿಣಾಮಗಳಾಗಿವೆ. ಸಾವು, ಮಾರಣಾಂತಿಕ ಪರಿಣಾಮ, ಆಸ್ಪತ್ರೆಗೆ ದಾಖಲು, ಅಂಗವೈಕಲ್ಯ ಅಥವಾ ಶಾಶ್ವತ ಹಾನಿ ಅಥವಾ ಗರ್ಭಧಾರಣೆಯ ಮೊದಲು ಅಥವಾ ಗರ್ಭಾವಸ್ಥೆಯಲ್ಲಿ ಜನನ ದೋಷಕ್ಕೆ ಕಾರಣವಾಗುವ ಅಡ್ಡಪರಿಣಾಮಗಳನ್ನು ಗಂಭೀರ ಅಡ್ಡಪರಿಣಾಮಗಳೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ : ಕೇರಳದಲ್ಲಿ ಭಾರಿ ಮಳೆ; ಗಿರಿಶಿಖರಗಳಿಗೆ ಪ್ರವಾಸಕ್ಕೆ ತೆರಳುವ ಮುನ್ನ ಎಚ್ಚರ.. ಸರ್ಕಾರದ ವಾರ್ನಿಂಗ್​ - heavy Rain in Kerala

ABOUT THE AUTHOR

...view details