ಬೆಳಗಾವಿ: ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಶಕ್ತಿಶಾಲಿಯಾಗಿ ಹೋರಾಟ ಮಾಡುವ ಹೆಣ್ಣುಮಗಳು ಪ್ರಿಯಾಂಕಾ ಗಾಂಧಿ. ಪ್ರಿಯಾಂಕಾ ಮೆತ್ತಗೆ ಕಾಣುತ್ತಾರೆ, ಮುಟ್ಟಿ ನೋಡಿ. ನಮ್ಮ ಕಿತ್ತೂರು ಚನ್ನಮ್ಮ ಪ್ರಿಯಾಂಕಾ ಗಾಂಧಿ. ನಾನೇನು ಹೊಗಳುತ್ತಿಲ್ಲ. ಅವರಿಗೆ ಅಷ್ಟೊಂದು ಶಕ್ತಿ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ಪಟ್ಟರು.
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಂದೆ ಕಳೆದುಕೊಂಡಾಗ ಪ್ರಿಯಾಂಕಾ ಅವರಿಗೆ ನಾಲ್ಕೈದು ವರ್ಷ. ತಾಯಿ ರಕ್ಷಣೆಯಲ್ಲಿ ಬೆಳೆದು ಬಂದ ಅವರು ಇಂದು ಈ ಹಂತಕ್ಕೆ ಬಂದು ನಿಂತಿದ್ದಾರೆ. ಪ್ರಿಯಾಂಕಾ ಎಂದೂ ಕೂಡ ತನ್ನ ಕೊರತೆ, ಕಮಜೋರಿ ದೇಶಕ್ಕೆ ತೋರಿಸಿದವರಲ್ಲ. ಗಾಂಧಿ ಕುಟುಂಬ ಅಂಥದ್ದು. ಇಂಥ ಕುಟುಂಬಕ್ಕೆ ಮೋದಿ, ಅಮಿತ್ ಶಾ ಮತ್ತು ಅವರ ಚಮಚಾಗಳೂ ಬೈಯ್ಯುತ್ತಾರೆ. ದೇಶದ ಜನ ಹೆದರಬೇಕಿಲ್ಲ. ಬಿಜೆಪಿ ವಿರುದ್ಧ ಹೋರಾಡಲು ನಾವು ಸಿದ್ಧರಾಗಿದ್ದೇವೆ ಎಂದು ಖರ್ಗೆ ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಗಿದ್ದ ನನ್ನನ್ನ ರಾಷ್ಟ್ರ ಅಧ್ಯಕ್ಷರನ್ನಾಗಿಸಿದ್ದಾರೆ: ಬ್ಲಾಕ್ ಕಾಂಗ್ರೆಸ್ ಆಗಿದ್ದ ನಾನು ಇಂದು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ನಾಯಕನನ್ನಾಗಿ ಮಾಡಿದ್ದಾರೆ. ಇದು ಸಣ್ಣ ಮಾತಲ್ಲ. ಚುನಾವಣೆ ಆದರೂ ನನ್ನೊಂದಿಗೆ ಇದ್ದು ಕೈಜೋಡಿಸಿ, ಸಹಾಯ ಮಾಡಿ ಇಂದು ಆರಿಸಿ ತಂದಿದ್ದಾರೆ. ಅದಕ್ಕಾಗಿ ನಾನು ಅವರಿಗೆಲ್ಲ ಚಿರ ಋಣಿ ಇದ್ದೇನೆ. ಕರ್ನಾಟಕ ಕಾಂಗ್ರೆಸ್‌ನ ಒಬ್ಬ ಕಾರ್ಯಕರ್ತ ಅಖಿಲ ಭಾರತ ಮಟ್ಟದ ಅಧ್ಯಕ್ಷನಾಗಲು ನಿಮ್ಮೆಲ್ಲರ ಆಶೀರ್ವಾದ ಇಲ್ಲದೇ ಸಾಧ್ಯವಿರಲಿಲ್ಲ. ಇದು ಕಾಂಗ್ರೆಸ್‌ನ ಗುಣ. ಬಿಜೆಪಿಯವರು ಏನೇ ಹೇಳಲಿ, ಬರೀ ಮಾತಲ್ಲಿ ಹೇಳುತ್ತಾರೆ. ಬಿಜೆಪಿ, ಆರ್‌ಎಸ್‌ಎಸ್, ಹಿಂದೂ ಮಹಾಸಭಾದವರು ದಲಿತರ ಜತೆಯಲ್ಲಿ ಯಾವತ್ತೂ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.
ಕೆಪಿಸಿಸಿ, ಸಿದ್ದರಾಮಯ್ಯಗೆ ಧನ್ಯವಾದ ಸಲ್ಲಿಸುತ್ತೇನೆ: ಇವರು ಯಾವಾಗಲೂ ದಲಿತರ ವಿರೋಧಿಗಳು. ರೈತರು, ಬಡವರು, ದಲಿತರ ಬಗ್ಗೆ ಕಾಳಜಿ ಇಲ್ಲ. ಎಂಎಸ್‌ಪಿ ಹೆಚ್ಚು ಮಾಡಲು ಮೋದಿ ಅವರು ಎಂದೂ ಗಮನ ಕೊಟ್ಟಿಲ್ಲ. ಆದರೆ, ದಲಿತರ ಪರ ಎಂದು ಪ್ರಚಾರ ಮಾತ್ರ ತೆಗೆದುಕೊಳ್ಳುತ್ತಾರೆ. ಡಿ.26ರಂದು ನಾವು ಹೊಸ ಸಂಕಲ್ಪ ಮಾಡಿದ್ದೇವೆ. ನವಸತ್ಯಾಗ್ರಹ ಸಭೆ ಮಾಡಿದ್ದೇವೆ. ಕರ್ನಾಟಕದ ಕಾಂಗ್ರೆಸ್ ಬಲಶಾಲಿ ಎಂದು ನೀವು ತೋರಿಸಿದ್ದೀರಿ. ಇಷ್ಟು ಅಚ್ಚುಕಟ್ಟಾದ ಕಾರ್ಯಕ್ರಮ ನಾನು ಬೇರೆಲ್ಲೂ ನೋಡಿಲ್ಲ. ಕೆಪಿಸಿಸಿ ಹಾಗೂ ಸಿದ್ದರಾಮಯ್ಯ ಸರ್ಕಾರ ಹಾಗೂ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇದು ಕಿತ್ತೂರು ರಾಣಿ ಚನ್ನಮ್ಮನ ಜನ್ಮಭೂಮಿ. ಈ ನಾಡಿನಲ್ಲಿ ಹುಟ್ಟಿ ದೇಶದ ಸ್ವಾತಂತ್ರ್ಯದ ರಕ್ಷಣೆಗೆ ಚನ್ನಮ್ಮ ಹೋರಾಡಿದರು ಎಂದು ಖರ್ಗೆ ಅವರು ಸ್ಮರಿಸಿದರು.
ಭಾರತಕ್ಕಾಗಿ ಸಾಯಲು ಬಯಸುತ್ತೇನೆ: ನಾನು ಬದುಕಿರಲು ಬಯಸುತ್ತೇನೆ, ಕೇವಲ ಭಾರತಕ್ಕಾಗಿ ಸಾಯಲು ಬಯಸುತ್ತೇನೆ, ಅದು ಕೇವಲ ಭಾರತಕ್ಕಾಗಿ. ಬದುಕಿದರೂ ದೇಶಕ್ಕಾಗಿ, ಸತ್ತರೂ ದೇಶಕ್ಕಾಗಿ ಎಂಬ ಸಂದೇಶವನ್ನು ಗಾಂಧಿ ಇದೇ ನೆಲದಿಂದ ಕರೆ ಕೊಟ್ಟರು. ಅಂಥವರ ಬಗ್ಗೆಯೂ ಬಿಜೆಪಿಯವರು ಇಂದು ಟೀಕೆ ಮಾಡುತ್ತಾರೆ. ಅವರನ್ನು ಗುಂಡು ಹಾಕಿ ಕೊಂದವರು ಯಾರು? ಗೋಡ್ಸೆ ಯಾರ ಶಿಷ್ಯ, ಸಾವರ್ಕರ್ ಶಿಷ್ಯ. ಇವರೆಲ್ಲರನ್ನೂ ಮೋದಿ, ಶಾ ಅವರು ಹೊತ್ತು ಮೆರೆಯುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಗಾಂಧಿ – ನೆಹರು ಮಧ್ಯೆ, ಪಟೇಲ್–ಗಾಂಧಿ, ಅಂಬೇಡ್ಕರ್–ಗಾಂಧಿ ಮಧ್ಯೆ ವ್ಯತ್ಯಾಸ ಮತ್ತು ಜಗಳ ಇತ್ತು ಎಂದು ಪ್ರಚಾರ ಮಾಡುತ್ತಾರೆ. ಈಗಿನ ಕಾಂಗ್ರೆಸ್‌ನಲ್ಲಿಯೂ ವ್ಯತ್ಯಾಸ ತೋರಿಸಿ ಒಡೆದಾಳುತ್ತಿದ್ದಾರೆ. ನಮಗಾಗಿ ಹೋರಾಡಿದ ಮಹಾತ್ಮರಲ್ಲೇ ಬಿಜೆಪಿಯವರು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಅಹಮಾದಾಬ್‌ನ ಗುಜರಾತಿನ ಗಾಂಧಿ ಅವರ ಬಗ್ಗೆಯೇ ಮೋದಿಗೆ ಕಳಕಳಿ ಇಲ್ಲ. ಎಂದೂ ಕೂಡ ಒಳ್ಳೆಯ ಮಾತನಾಡಿಲ್ಲ. ಜಯಂತಿಗೆ ಬಂದು ನಮಸ್ಕಾರ ಮಾಡಿ ಹೋಗುತ್ತಾರೆ. ಅವರು ಪೂಜೆ ಮಾಡುವುದು ಗಾಂಧೀಜಿ ಅವರಿಗೆ ಗುಂಡು ಹಾಕಿದ ಗೋಡ್ಸೆಗೆ. ಸಾವರ್ಕರ್ ಅವರೇ ಲೀಡರ್, ಗಾಂಧೀ ಅಲ್ಲ ಎಂದು ಅವರು ಬಿಂಬಿಸಲು ಹೊರಟಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.
ಗಾಂಧಿ ಕಾಂಗ್ರೆಸ್ ಅಧ್ಯಕ್ಷತೆಯ ಶತಮಾನೋತ್ಸವ: 1924ರಲ್ಲಿ ಅಂಬೇಡ್ಕರ್ ಕೂಡ ‘ಬಹಿಷ್ಕೃತ ಹಿತಕರ್ಣಿ ಸಭಾ’ ಮಾಡಿದರು. ಅದಕ್ಕೂ ಈಗ ನೂರು ವರ್ಷ ಆಗಿದೆ. ಕಾಂಗ್ರೆಸ್ ಅಂಬೇಡ್ಕರ್‌ಗೆ ಬೆಲೆ ಕೊಡಲಿಲ್ಲ, ಹಿಂಸೆ ಮಾಡಿದರು ಎಂದೆಲ್ಲ ಅಪಪ್ರಚಾರ ಮಾಡುತ್ತಾರೆ. ಇದು ಸಾಧ್ಯವಿಲ್ಲ. ಅಂಬೇಡ್ಕರ್ ಪ್ರತಿಮೆ ಮೊದಲು ನಿರ್ಮಾಣ ಮಾಡಿದ್ದು ಇಂದಿರಾ ಗಾಂಧಿ ಅವರು. ಆದರೆ, ಈ ಮೋದಿ ಅಂಬೇಡ್ಕರ್ ಮೂರ್ತಿ ಮೂಲೆಗೆ ಹಾಕಿದ್ದಾನೆ. ಯಾರು ಬಂದರೂ ಅಂಬೇಡ್ಕರ್ ಕಾಣಿಸುವುದಿಲ್ಲ. ಸಂವಿಧಾನ, ಅಬೇಡ್ಕರ್, ನೆಹರೂ ಮೂರ್ತಿ ಸುಟ್ಟವರು ಬಿಜೆಪಿ-ಆರ್‌ಎಸ್‌ಎಸ್, ಹಿಂದೂ ಮಹಾಸಭಾದವರು. ಇದೆಲ್ಲ ಇತಿಹಾಸದಲ್ಲಿದೆ. ನಾನು ಚಾಲೇಂಜ್ ಮಾಡುತ್ತೇನೆ. ಎರಡು ಸಾರಿ ಬಾಬಾಸಾಹೇಬ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು ಕಾಂಗ್ರೆಸ್ಸಿಗರು. ಅಂಬೇಡ್ಕರ್ ಅವರನ್ನು ಸೋಲಿಸಿದರು ಎಂದು ಹೇಳುತ್ತೀರಿ ಎಂದು ಪ್ರಶ್ನಿಸಿದರು.
ರಾಹುಲ್ ಸಂವಿಧಾನ ಆಂದೋಲನದ ಬಳಿಕ ಮೋದಿ ಎಚ್ಚೆತ್ತುಕೊಂಡಿದ್ದಾರೆ: ಜವಾಹರಲಾಲ್ ನೆಹರು ಅವರು ಎಂ.ಆರ್.ಜಯಕರ್ ಅವರ ರಾಜೀನಾಮೆ ಕೊಡಿಸಿ ಅಂಬೇಡ್ಕರ್ ಅವರನ್ನು ಆ ಸ್ಥಾನದಲ್ಲಿ ಕೂಡ್ರಿಸಿದರು. ರಾಮಲೀಲಾ ಮೈದಾನದಲ್ಲಿ ನೆಹರು, ಅಂಬೇಡ್ಕರ್ ಫೋಟೋ ಸುಟ್ಟರು. ನಮ್ಮನ್ನು ಕೆಣಕಬೇಡಿ. ಕೆಣಕಿದರೆ ಸುಟ್ಟು ಹೋಗುತ್ತೀರಿ. ನೀವು ಉಳಿಯಂಗಿಲ್ಲ. ನನ್ನ ಸೋಲಿಗೆ ಸಾವರ್ಕರ್ ಮತ್ತು ಎಸ್.ಎ.ಡಾಂಗೆ ಎಂಬವರು ಸೇರಿ ಸೋಲಿಸಿದ್ದಾರೆ ಎಂದು ಅಂಬೇಡ್ಕರ್ ಅವರು ತಮ್ಮ ಸ್ನೇಹಿತ ಕಮಲಾಕಾಂತ್ ಅವರಿಗೆ ಪತ್ರ ಬರೆದಿದ್ದಾರೆ. ನೀವು ಇಂಥ ಇತಿಹಾಸದ ದಾಖಲೆ ತಿಳಿದುಕೊಳ್ಳಬೇಕು. ಆದರೆ, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ದೊಡ್ಡ ಗೌರವ, ಅಧಿಕಾರ ಸ್ಥಾನ ನೀಡಿತು. ಅಂಬೇಡ್ಕರ್ ಸಂವಿಧಾನ, ಮನೃಸ್ಮೃತಿಯಂತೆ ಇಲ್ಲ ಅದನ್ನು ಒಪ್ಪುವುದಿಲ್ಲ, ಅಶೋಕ ಚಕ್ರ, ತಿರಂಗಾ ಝಂಡಾ ಒಪ್ಪಲಿಲ್ಲ ನೀವು. 50 ವರ್ಷ ತಿರಂಗ ಧ್ವಜವನ್ನು ಅವರು ಕಚೇರಿಯಲ್ಲಿ ಹಾರಿಸಲಿಲ್ಲ. ರಾಹುಲ್ ಗಾಂಧಿ ಅವರು ಸಂವಿಧಾನ ರಕ್ಷಣೆ ಆಂದೋಲನ ಶುರು ಮಾಡಿದ ಮೇಲೆ ಎಚ್ಚೆತ್ತುಕೊಂಡ ಮೋದಿ, ಈಗ ಸಂವಿಧಾನ ಕಾಪಾಡುವ ಮಾತನಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ದೇವರ ಹೆಸರು ಹೇಳಿದ್ದರೆ ಏಳು ಜನ್ಮಕ್ಕೂ ಸ್ವರ್ಗ ಸಿಗುತ್ತಿತ್ತು. ಅಂಬೇಡ್ಕರ್ ಹೆಸರು ಹೇಳಿ ಏನು ಬರುತ್ತದೆ ಎಂದು ಶಾ ಹೇಳಿದ್ದಾರೆ. ಇದಕ್ಕೆ ನಾವು ಉತ್ತರ ಕೊಡಬೇಕಿದೆ. ನಮ್ಮ ಸಂಸದರು ಧರಣಿ ಮಾಡಿದರು. ಇದಕ್ಕೆ ದೇಶದ ಜನರ ಅಗತ್ಯವಿದೆ. ನೀವು ನಿಮ್ಮೊಂದಿಗೆ ಹೋರಾಡುವ ಜನರ ಜತೆಗೆ ಇರುತ್ತೀರೋ ಅಥವಾ ಅಂಬೇಡ್ಕರ್‌ಗೆ ಅವಮಾನ ಮಾಡಿದವರ ಜತೆಗೆ ಹೋಗುತ್ತೀರೋ ಯೋಚನೆ ಮಾಡಿ. ಗೃಹ ಸಚಿವ ಅಮಿತ್ ಶಾ ಅವರು ದೇಶದ ಕ್ಷಮೆ ಕೇಳಲೇಬೇಕು ಎಂದು ಖರ್ಗೆ ಆಗ್ರಹಿಸಿದರು.
ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧ ಸಿಎಂ ವಾಗ್ದಾಳಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂವಿಧಾನ ದ್ವೇಷಿಯಾಗಿರುವ ಆರ್.ಎಸ್.ಎಸ್. ಸಿದ್ಧಾಂತವನ್ನು ಬಿಜೆಪಿ ಭಾರತೀಯರ ಮೇಲೆ ಹೇರುತ್ತಿದೆ. ಇದನ್ನು ಹಿಮ್ಮೆಟ್ಟಿಸೋಣ ಎಂದು ಕರೆ ನೀಡಿದರು.
ಅವರು, ಬಿಜೆಪಿ ಪರಿವಾರ ಭಾರತದಲ್ಲಿ ಬಹಳ ವ್ಯವಸ್ಥಿತವಾಗಿ ಒಡಕು ಉಂಟು ಮಾಡುತ್ತಿದೆ. ಭಾರತೀಯರ ನಡುವೆ ಬಿರುಕು ಮೂಡಿಸುತ್ತಾ ಭಾರತವನ್ನು ದುರ್ಬಲಗೊಳಿಸುತ್ತಿದೆ. ಬಿಜೆಪಿಯ ಈ ಯತ್ನವನ್ನು ನಾವು ಸೋಲಿಸಬೇಕು. ಇದಕ್ಕೆ ಗಾಂಧಿ - ಅಂಬೇಡ್ಕರ್ ಅವರೇ ನಮಗೆ ಮಾರ್ಗದರ್ಶಕರು ಎಂದರು.
ಸಂವಿಧಾನ ಜಾರಿಯಾದಾಗ ಬಿಜೆಪಿ ಪರಿವಾರ ಅಂಬೇಡ್ಕರ್ ಭಾವಚಿತ್ರವನ್ನು, ಸಂವಿಧಾನವನ್ನು ಸುಟ್ಟಿತ್ತು. ಇದನ್ನು ಈ ದೇಶ, ಈ ದೇಶದ ಜನ ಸಮುದಾಯ ಯಾವತ್ತೂ ಕ್ಷಮಿಸುವುದಿಲ್ಲ, ಮರೆಯುವುದಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದರು.
ಹಲವು ಭಾಷೆ, ಹಲವು ಜಾತಿ, ಹಲವು ಧರ್ಮ ಭಾರತದ ಶಕ್ತಿ. ಬಿಜೆಪಿ ಪರಿವಾರ ಗಾಂಧಿ, ಅಂಬೇಡ್ಕರ್ ಅವರನ್ನು ದ್ವೇಷಿಸುತ್ತದೆ. ನಾವು ಇಬ್ಬರ ಆಶಯಗಳನ್ನೂ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತೇವೆ, ವಿಸ್ತರಿಸುತ್ತೇವೆ. ನಾವು ಸಂವಿಧಾನ ರಕ್ಷಿಸಿದರೆ, ಅದೇ ಸಂವಿಧಾನ ನಮ್ಮೆಲ್ಲರನ್ನೂ ರಕ್ಷಿಸುತ್ತದೆ. ನಮಗೆ ಚುನಾವಣೆ ಗೆಲ್ಲುವುದಕ್ಕಿಂತ ನಮ್ಮ ಸಿದ್ಧಾಂತ ಗೆಲ್ಲಬೇಕು. ಅದು ಮಾತ್ರ ನಮ್ಮ ನಿಜವಾದ ಗೆಲುವು ಎಂದು ಸಿದ್ದರಾಮಯ್ಯ ಹೇಳಿದರು.
ಗಾಂಧಿ, ಅಂಬೇಡ್ಕರ್ ಅವರ ಆಶಯಗಳು, ಮೌಲ್ಯಗಳ ಈಡೇರಿಕೆಗೆ ನಾವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ. ಇದಕ್ಕಾಗಿ ಬಜೆಟ್ನಲ್ಲಿ 52 ಸಾವಿರ ಕೋಟಿಗೂ ಅಧಿಕ ಮೊತ್ತದ ಹಣವನ್ನು ನೇರವಾಗಿ ಜನರ ಖಾತೆಗೆ ಹಾಕಿ ರಾಜ್ಯದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದ್ದೇವೆ ಎಂದು ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.