ರಾಯಪುರ\ಮುಂಗೇಲಿ:ಪಾರಿವಾಳ ಶಾಂತಿ ಮತ್ತು ಸ್ವಾತಂತ್ರ್ಯದ ಸಂಕೇತ. ಸಾಮಾನ್ಯವಾಗಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಹಾರಿ ಬಿಡುವುದು ವಾಡಿಕೆ. ಈಚೆಗೆ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಛತ್ತೀಸ್ಗಢದಲ್ಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಬಿಡುಗಡೆ ಮಾಡಿದ ಪಾರಿವಾಳ ಹಾರದೆ, ಕೆಳಕ್ಕೆ ಬಿದ್ದಿದೆ. ಇದರಿಂದ ಅವರಿಗೆ ಇರಿಸುಮುರಿಸಾಗಿದ್ದು, ಇಂತಹ ಪಾರಿವಾಳವನ್ನು ತಂದ ಅಧಿಕಾರಿಯ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.
ಪೊಲೀಸ್ ಅಧಿಕಾರಿ ಹಾರಿಬಿಟ್ಟ ಪಾರಿವಾಳ ಮುದುಡಿಕೊಂಡೇ ಕೆಳ ಬಿದ್ದ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಯನ್ನು ಟ್ರೋಲ್ ಕೂಡಾ ಮಾಡಲಾಗಿದೆ. ಪಂಚಾಯತ್ ವೆಬ್ ಸಿರೀಸ್ನಲ್ಲಿ ಇಂಥದ್ದೇ ದೃಶ್ಯವಿದ್ದು, ಅದಕ್ಕೆ ಹೋಲಿಸಲಾಗಿದೆ. ಇದರಿಂದ ಅಧಿಕಾರಿಯನ್ನು ಕೆರಳಿಸಿದೆ.
ಅಂದು ನಡೆದ ಘಟನೆ:ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪುನ್ನುಲಾಲ್ ಮೊಹಲೆ, ಜಿಲ್ಲಾಧಿಕಾರಿ ರಾಹುಲ್ ದೇವ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಗಿರಿಜಾ ಶಂಕರ್ ಜೈಸ್ವಾಲ್ ಭಾಗವಹಿಸಿದ್ದರು. ಧ್ವಜಾರೋಹಣದ ಬಳಿಕ ಶಾಂತಿ ಮತ್ತು ಸ್ವಾತಂತ್ರ್ಯದ ಸಂಕೇತವಾಗಿ ಪಾರಿವಾಳವನ್ನು ಬಿಡುಗಡೆ ಮಾಡಲಾಯಿತು. ಶಾಸಕ ಮತ್ತು ಜಿಲ್ಲಾಧಿಕಾರಿ ಬಿಟ್ಟ ಪಾರಿವಾಳಗಳು ರೆಕ್ಕೆ ಬಡಿಯುತ್ತಾ ಹಾರಿ ಹೋಗಿವೆ.