ಚೆನ್ನೈ (ತಮಿಳುನಾಡು):ತಮಿಳುನಾಡಿನಲ್ಲಿ ದಿವಂಗತ ಜಯಲಲಿತಾ ಅವರು ಬದುಕಿರುವವರೆಗೂ ನೀಟ್ ಪರೀಕ್ಷೆಗೆ ಅವಕಾಶವನ್ನೇ ನೀಡಿರಲಿಲ್ಲ. ಜಯಲಲಿತಾ ಮರಣದ ನಂತರವೇ ಆಗಿನ ಎಐಎಡಿಎಂಕೆ ಸರ್ಕಾರ ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡದ ಮೇರೆಗೆ ಈ ಪರೀಕ್ಷೆಗೆ ಗುಟ್ಟಾಗಿ ಅನುಮತಿ ನೀಡಿತ್ತು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸಜ್ಜಾಗಿದೆ. ರಾಮನಾಥಪುರದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿಎಂಕೆ ಯುವ ಘಟಕದ ಕಾರ್ಯದರ್ಶಿಯೂ ಆಗಿರುವ ಉದಯನಿಧಿ ಸ್ಟಾಲಿನ್, ನೀಟ್ ವಿಷಯದಲ್ಲಿ ಅಂದಿನ ಮುಖ್ಯಮಂತ್ರಿ ಜಯಲಲಿತಾ ತಾಳಿದ್ದ ನಿಲುವಿನ ಬಗ್ಗೆ ಶ್ಲಾಘಿಸುವ ಮೂಲಕ ನೆರೆದಿದ್ದ ಜನರನ್ನು ಅಚ್ಚರಿಗೊಳಿಸಿದರು. ಇದೇ ವೇಳೆ, ನೀಟ್‌ನಿಂದ ರಾಜ್ಯವನ್ನು ಹೊರಗಿಡಬೇಕೆಂಬ ಡಿಎಂಕೆಯ ಬೇಡಿಕೆಗೆ ಬದ್ಧವಾಗಿದೆ. ಇದರ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದರು.
ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉದಯನಿಧಿ ಸ್ಟಾಲಿನ್, ಬಿಜೆಪಿ ಒಡೆದು ಆಳುವ, ಕೋಮುವಾದಿ ರಾಜಕಾರಣ ಮಾಡಲು ಯತ್ನಿಸುತ್ತಿದೆ. ಆದರೆ, ಇದನ್ನು ತಮಿಳುನಾಡಿನ ಜನತೆ ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಕೇಂದ್ರ ಸರ್ಕಾರದಿಂದ ತಮಿಳುನಾಡು ಜನರಿಗೆ ಒಂದು ಪೈಸೆ ಕೂಡ ಪ್ರಯೋಜನವಾಗಿಲ್ಲ. ಅನುದಾನ ನೀಡುವಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯವು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಪಾವತಿಸುತ್ತದೆ. ತೆರಿಗೆಯಾಗಿ ಪಾವತಿಸುವ ಪ್ರತಿ ರೂಪಾಯಿಗೆ ಕೇಂದ್ರ ಸರ್ಕಾರ ಕೇವಲ 28 ಪೈಸೆಯನ್ನು ರಾಜ್ಯಕ್ಕೆ ನೀಡುತ್ತಿದೆ. ಅಲ್ಲದೇ, ಕೇಂದ್ರ ಸರ್ಕಾರವು ದುರಾಡಳಿತದಲ್ಲಿ ತೊಡಗಿದೆ. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಪ್ರಕಾರ, ಈ ಸರ್ಕಾರದಿಂದ ಬೊಕ್ಕಸಕ್ಕೆ 7.5 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ. ದ್ವಾರಕಾ ಎಕ್ಸ್‌ಪ್ರೆಸ್ ವೇನಲ್ಲಿ ಒಂದು ಕಿಲೋ ಮೀಟರ್ ರಸ್ತೆಗೆ ಕೇಂದ್ರವು 125 ಕೋಟಿ ರೂ. ಖರ್ಚು ಮಾಡಿದೆ. 88 ಸಾವಿರ ಮೃತ ಜನರ ಹೆಸರಲ್ಲಿ ಆರೋಗ್ಯ ವಿಮೆ ನೀಡಿರುವ ಬಗ್ಗೆ ಸಿಎಜಿ ವರದಿ ಬಹಿರಂಗಪಡಿಸಿದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.