ಎರ್ನಾಕುಲಂ (ಕೇರಳ) : ಜಿಲ್ಲೆಯ ಕುಟ್ಟಂಪುಳ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಮೂವರು ಮಹಿಳೆಯರನ್ನು ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು 16 ಗಂಟೆಗಳ ತೀವ್ರ ಶೋಧದ ನಂತರ ಪತ್ತೆ ಮಾಡಿದ್ದಾರೆ. ಮಾಯಾ ಜಯನ್, ಪಾರುಕುಟ್ಟಿ ಮತ್ತು ಡಾರ್ಲಿ ನಾಪತ್ತೆಯಾದವರು.
ಕಾಣೆಯಾದ ಹಸು ಹುಡುಕಲು ಮೂವರು ಗುರುವಾರ ಕಾಡಿಗೆ ಹೋಗಿದ್ದಾರೆ. ಆದರೆ, ಕಾಡು ಆನೆಗಳ ಹಿಂಡು ಎದುರಾದ ನಂತರ ದಾರಿ ತಪ್ಪಿದ್ದಾರೆ. ಆನೆಗಳ ಸ್ವರ್ಗವೆಂದು ಹೆಸರಾದ ಸುಮಾರು ಆರು ಕಿಲೋಮೀಟರ್ ದೂರದ ಅರಕ್ಕಮುತಿಯಲ್ಲಿ ಮಹಿಳೆಯರು ಸಿಲುಕಿದ್ದರು. ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.
ಹುಡುಕಾಟ ಪ್ರಾರಂಭ : ಬುಧವಾರದಂದು ಮಾಯಾ ಎಂಬುವವರ ಹಸು ನಾಪತ್ತೆಯಾದಾಗ ಇವರಿಗೆ ತೊಂದರೆ ಸಿಲುಕಿದ್ದಾರೆ. ಮರುದಿನ ಬೆಳಗ್ಗೆ ಮಾಯಾ ಅದನ್ನು ಹುಡುಕಲು ಏಕಾಂಗಿಯಾಗಿ ಕಾಡಿಗೆ ಹೊರಟಿದ್ದಾರೆ. ಆದರೆ, ಹಸು ಸಿಗದೆ ಬರಿಗೈಯಲ್ಲಿಯೇ ಹಿಂದಿರುಗಿದ್ದಾರೆ. ಅದೇ ದಿನ ಮಧ್ಯಾಹ್ನ ಸುಮಾರು 3:00 ಗಂಟೆಗೆ ಅವರು ಮುನಿಪ್ಪಾರ ಬಳಿಯ ತೇಗದ ತೋಟದ ಮೂಲಕ ಪಾರುಕುಟ್ಟಿ ಮತ್ತು ಡಾರ್ಲಿಯೊಂದಿಗೆ ಮತ್ತೆ ಕಾಡಿಗೆ ಪ್ರವೇಶಿಸಿದ್ದಾರೆ. ಅಷ್ಟರಲ್ಲಿ ಹಸು ತಾನಾಗಿಯೇ ಮನೆಗೆ ಮರಳಿದೆ. ಆದರೆ, ಹಿಂದಿರುಗುವಾಗ ಮಾಯಾ ತನ್ನ ಪತಿಗೆ ಕಾಡು ಆನೆಗಳ ಹಿಂಡು ಕಂಡಿರುವುದಾಗಿ ತಿಳಿಸಲು ಪ್ರಯತ್ನಿಸಿದ್ದಾರೆ. ಆದರೆ ಫೋನ್ನಲ್ಲಿ ಸಂಪರ್ಕಿಸಲು ಸಾಧ್ಯವಾಗಿಲ್ಲ. ಈ ವೇಳೆ ಆನೆಗಳಿಂದ ತಪ್ಪಿಸಿಕೊಳ್ಳಲು ಮೂವರು ಓಡಿಹೋಗಿದ್ದು, ನಂತರ ಅವರು ಕಾಡಿನಲ್ಲಿ ನಾಪತ್ತೆಯಾಗಿದ್ದರು.
ಸವಾಲಿನ ಶೋಧ ಕಾರ್ಯಾಚರಣೆ : ಮಹಿಳೆಯರು ನಾಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಸ್ವಯಂಸೇವಕರು ಸೇರಿದಂತೆ 50 ಜನರ ತಂಡದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು. ನಾಲ್ಕು ಗುಂಪುಗಳಾಗಿ ವಿಂಗಡಿಸಲಾದ ಶೋಧನಾ ದಳವು ಮಹಿಳೆಯರನ್ನು ಹುಡುಕಲು ಹೊರಟಿತು.
ಆದರೆ, ಆನೆಗಳಿಂದ ಎದುರಾಗುವ ಅಪಾಯ ಮತ್ತು ಕತ್ತಲೆಯಿಂದಾಗಿ ಎರಡು ಗುಂಪುಗಳು ಶೋಧ ಕಾರ್ಯಾಚರಣೆಯನ್ನ ನಿಲ್ಲಿಸಿ ಹಿಂತಿರುಗಬೇಕಾಯಿತು. ಸವಾಲುಗಳ ಹೊರತಾಗಿಯೂ ಎರಡು ಗುಂಪುಗಳು ರಾತ್ರಿಯಿಡೀ ಕಾಡಿನಲ್ಲಿಯೇ ಇದ್ದವು ಮತ್ತು ಹುಡುಕಾಟದಲ್ಲಿ ಸಹಾಯ ಮಾಡಲು ಡ್ರೋನ್ ನಿಯೋಜಿಸಲಾಯಿತು. ತಂಡವು ಮಹಿಳೆಯರ ಮೊಬೈಲ್ ಫೋನ್ ಸ್ಥಳವನ್ನು ಸಹ ಟ್ರ್ಯಾಕ್ ಮಾಡಿದೆ. ಬೆಳಗಿನ ವೇಳೆಗೆ ರಕ್ಷಣಾ ತಂಡ ಅರಕ್ಕಮುತ್ತಿಯಲ್ಲಿನ ಬಂಡೆಯ ಮೇಲೆ ಆಶ್ರಯ ಪಡೆದಿದ್ದ ನಾಪತ್ತೆಯಾದ ಮಹಿಳೆಯರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ರಾತ್ರಿಯಿಡೀ ಮುಂದುವರೆದ ಹುಡುಕಾಟ ಪ್ರಯತ್ನ: ಯಾರಾದರೂ ಹತ್ತಿರ ಬಂದರೆ ಅಪಾಯವಾಗಬಹುದೆಂಬ ಭಯದಿಂದ ಮಾಯಾ, ಪಾರುಕುಟ್ಟಿ ಮತ್ತು ಡಾರ್ಲಿ ರಾತ್ರಿಯಿಡೀ ಬಂಡೆಯ ಮೇಲೆ ಅಡಗಿಕೊಂಡಿದ್ದರು. ಅರಣ್ಯ ಪರಿಚಯವಿರುವ ಸ್ಥಳೀಯ ಮಾರ್ಗದರ್ಶಕರು ಅಧಿಕೃತ ತಂಡಗಳಿಗೆ ಸಹಾಯ ಮಾಡಿದ್ದರಿಂದ ಹುಡುಕಾಟದ ಪ್ರಯತ್ನವು ರಾತ್ರಿಯಿಡೀ ಮುಂದುವರೆಯಿತು. ರಕ್ಷಣಾ ತಂಡವು ಪಟಾಕಿಗಳನ್ನು ಬಳಸಿ ಅವರ ಗಮನ ಸೆಳೆಯಲು ಸದ್ದು ಮಾಡಿತ್ತು. ಆದರೆ ಜೀವ ರಕ್ಷಣೆಗಾಗಿ ಮಹಿಳೆಯರು ಬಂಡೆಯಲ್ಲಿಯೇ ಅವಿತುಕುಳಿತ್ತಿದ್ದರು.
ರಕ್ಷಣಾ ತಂಡಕ್ಕೆ ಮಹಿಳೆಯರಿಂದ ಕೃತಜ್ಞತೆ : ಹುಡುಕಾಟ ತಂಡವು ಬೇಟೆಗಾರರ ಅಥವಾ ದಾಳಿಕೋರರ ಗುಂಪಾಗಿರಬಹುದು, ಇವರಿಂದ ತಮ್ಮ ಜೀವಕ್ಕೆ ಅಪಾಯವುಂಟಾಗಬಹುದು ಎಂದು ಅವರು ಮೊದಲಿಗೆ ಕಳವಳ ಹೊಂದಿದ್ದಾಗಿ ತಿಳಿಸಿದ್ದಾರೆ. ಬದುಕುಳಿದವರು ಹಸಿವು ಮತ್ತು ಬಾಯಾರಿಕೆಯಿಂದ ದುರ್ಬಲರಾಗಿದ್ದರು. ಆದರೆ, ಆರೋಗ್ಯಯುತವಾಗಿಯೇ ಇದ್ದರು.
ತಮ್ಮನ್ನು ರಕ್ಷಿಸಿದ ಶೋಧ ತಂಡಗಳ ಪ್ರಯತ್ನಗಳಿಗೆ ಅವರು ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ರಾತ್ರಿಯಿಡೀ ಬಂಡೆಯ ಮೇಲೆ ಮಲಗಲು ಪ್ರಯತ್ನಿಸುವಾಗ ಆನೆಗಳ ಕೂಗು ಹೇಗೆ ಕೇಳಿಸಿತು ಎಂದು ಪಾರುಕುಟ್ಟಿ ನೆನಪಿಸಿಕೊಂಡಿದ್ದಾರೆ. ಮರು ದಿನ ಅವರು ಬಂಡೆಯಿಂದ ಇಳಿಯಲು ಪ್ರಾರಂಭಿಸಿದ್ದಾರೆ. ಈ ವೇಳೆ, ಅವರಿಗೆ ರಕ್ಷಣಾ ತಂಡದವರು ಸಿಕ್ಕಿದ್ದಾರೆ. ನಂತರ ಮಹಿಳೆಯರಿಗೆ ಅವರ ಶಕ್ತಿಯನ್ನು ಮರುಪೂರಣಗೊಳಿಸಲು ನೀರು ಮತ್ತು ಹಣ್ಣುಗಳನ್ನು ಒದಗಿಸಲಾಗಿದೆ. ನಂತರ ಅವರು ಮನೆಗೆ ಮರಳಿದ್ದಾರೆ.
ಸಮುದಾಯದವರಿಂದ ಸಂತೋಷಭರಿತ ಪುನರ್ಮಿಲನ : ಮಹಿಳೆಯರ ಸುರಕ್ಷತೆಯ ಸುದ್ದಿಗಾಗಿ ಇಡೀ ಸಮುದಾಯ ಕಾತರದಿಂದ ಕಾಯುತ್ತಿತ್ತು. ಶೋಧನಾ ತಂಡವು ಮಹಿಳೆಯರನ್ನು ಮರಳಿ ಕರೆತರುತ್ತಿದ್ದಂತೆ, ಸ್ಥಳೀಯರು ಕುಟ್ಟಂಪುಳದಲ್ಲಿ ಜಮಾಯಿಸಿ, ಅವರು ಸುರಕ್ಷಿತವಾಗಿ ಹಿಂದಿರುಗಿದ ಬಗ್ಗೆ ಸಮಾಧಾನ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪ್ರವಾಸಕ್ಕೆ ಬಂದ ಜಪಾನ್ ಮಹಿಳೆ ಗೋಕರ್ಣದಲ್ಲಿ ನಾಪತ್ತೆ