ಹುಬ್ಬಳ್ಳಿ/ಧಾರವಾಡ: ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿಯೇ ಈಗ ಒಡೆದ ಮನೆಯಾಗಿದೆ. ಕಾಂಗ್ರೆಸ್ ಪಕ್ಷ ಯಾವುದೇ ಸಮಾವೇಶ, ಏನೇ ಕಾರ್ಯ ಮಾಡಿದರೂ ಜನಹಿತಕ್ಕಾಗಿ ಮಾಡುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಅವಧಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದರು. ಈ ಬಗ್ಗೆ ಮಾತನಾಡುವ ಅಥಾರಿಟಿ ನಮಗೆ ಇಲ್ಲ. ಅದೆಲ್ಲದಕ್ಕೂ ಮುದ್ರೆ ಒತ್ತಲು ಹೈಕಮಾಂಡ್ ಇದೆ ಎಂದು ಹೇಳಿದರು.
ಅಹಿಂದ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ಹಾಸನದಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಲ್ಲಿಯೂ ಅಹಿಂದ ಸಮಾವೇಶ ಮಾಡಲಾಗುತ್ತದೆ. ಇದು ಯಾವುದೇ ಒಬ್ಬ ವ್ಯಕ್ತಿಗತವಾದಂತ ಸಮಾವೇಶ ಅಲ್ಲ. ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿ ಕಾಂಗ್ರೆಸ್ ಪಕ್ಷವೇ ಮಾಡುವ ಸಮಾವೇಶ ಎಂದರು.
ಸಿಎಂ ಅವಧಿಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವೈಯಕ್ತಿಕ ಹೇಳಿಕೆ ನೀಡುತ್ತಿದ್ದಾರೆ. ಈ ಐದು ವರ್ಷವೋ? ಮುಂದಿನ ಐದು ವರ್ಷವೂ ಗೊತ್ತಿಲ್ಲ. ನಮ್ಮ ಪಕ್ಷದ ನಿರ್ಧಾರದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಸಿಎಂ ಕುರ್ಚಿ ಖಾಲಿ ಇಲ್ಲ: ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಖಾಲಿ ಇದ್ದರೇ ಅಲ್ವಾ ಸಿಎಂ ಬದಲಾವಣೆ ವಿಚಾರ? ಇದೆಲ್ಲಾ ಮಾಧ್ಯಮದವರ ಸೃಷ್ಟಿ. ನಮ್ಮಲ್ಲಿ ಸಿಎಂ ಬದಲಾವಣೆ ವಿಚಾರವೇ ಇಲ್ಲ ಎಂದು ಹೇಳಿದರು.
ಸಿಎಂ, ಡಿಸಿಎಂ ಸಿಡಬ್ಲೂಸಿ (Congress Working Committee Meeting- ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ) ಮೆಂಬರ್ ಇದ್ದಾರೆ. ಈ ನಿಟ್ಟಿನಲ್ಲಿ ಮೀಟಿಂಗ್ ಅಟೆಂಡ್ ಆಗಲು ದೆಹಲಿಗೆ ಹೋಗಿದ್ದಾರೆ. ಸಿಎಂ ಖುರ್ಚಿ ಖಾಲಿ ಇದ್ದರೇ ಅಲ್ವಾ ಬದಲಾವಣೆ ವಿಚಾರ. ಇದೆಲ್ಲಾ ಮಾಧ್ಯಮದ ಸೃಷ್ಟಿ. ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಬೆಳವಣಿಗೆ ಇಲ್ಲ. ಅಷ್ಟಕ್ಕೂ ನಮ್ಮದು ಹೈಕಮಾಂಡ್ ಪಕ್ಷವಾಗಿದ್ದು, ಏನೇ ನಿರ್ಧಾರ ತೆಗೆದುಕೊಳ್ಳಬೇಕೆಂದರೂ ಅದು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು.
ಹಾಸನದಲ್ಲಿ ನಡೆಯುತ್ತಿರುವ ಅಹಿಂದ ಸಮಾವೇಶದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ನಾನು ಮಾಹಿತಿ ಪಡೆದುಕೊಳ್ಳುವೆ ಎಂದು ಇದೇ ವೇಳೆ ತಿಳಿಸಿದರು.
15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ: ಕಿತ್ತೂರು ಹೊರಭಾಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ವಿನಯ್ ಕುಲಕರ್ಣಿ, 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಈ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಸಚಿವ ಸ್ಥಾನಕ್ಕೆ ಸಿ.ಪಿ. ಯೋಗೇಶ್ವರ್ ಮತ್ತು ಲಕ್ಷ್ಮಣ ಸವದಿ ಹೆಸರು ಕೇಳಿ ಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ನನ್ನ ವೈಯಕ್ತಿಕ ಅಭಿಪ್ರಾಯ ಏನು ಇಲ್ಲ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದರು.
ಪಂಚಮಸಾಲಿ ಹೋರಾಟ ವಿಚಾರಕ್ಕೆ ಮಾತನಾಡಿ, ಕಳೆದ ಅಧಿವೇಶನದಲ್ಲಿ ಸ್ಪೀಕರ್ ಅವರಿಗೆ ಸಮಯ ಕೇಳಿದ್ದೆವು. ಆದರೆ, ಸದನ ನಡೆಯಲಿಲ್ಲ. ಮುಡಾ ಹಗರಣದಿಂದ ಒಂದು ದಿನವು ಕೂಡ ಸದನ ನಡೆಯಲು ಬಿಡಲಿಲ್ಲ. ಆ ಸಮಯದಲ್ಲಿ ಯಾರಿಗೂ ಮಾತನಾಡಲು ಅವಕಾಶ ಕೂಡ ಸಿಗಲಿಲ್ಲ ಎಂದು ಹೇಳಿದರು.
ಹೋರಾಟದಲ್ಲಿನ ಭಿನ್ನಾಭಿಪ್ರಾಯ ವಿಚಾರದ ಕುರಿತು ಪ್ರತಿಕ್ರಿಯಿಸಿ, ಆ ರೀತಿಯ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗಲು ಕೂಡ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಸ್ವಾಮೀಜಿಯವರು ನ್ಯಾಯ ಸಿಗುವರೆಗೂ ಹೋರಾಟ ಮಾಡುವವರು. ನಮ್ಮ ಸರ್ಕಾರ ಇದ್ದರು ನಾವು ಬೇಡ ಎಂದು ಹೇಳಲು ಆಗಲ್ಲ. ಪಂಚಮಸಾಲಿ ಸಮುದಾಯಕ್ಕೆ 2ಎ ಕೇಳುತ್ತಿದ್ದಾರೆ. ಮೀಸಲಾತಿ ಫಿಕ್ಸ್ ಮಾಡಲು ಕಷ್ಟ ಇದೆ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿ ಎಂಬುದು ನಮ್ಮ ಒತ್ತಾಯ ಇದೆ ಎಂದು ಆಗ್ರಹಿಸಿದರು.
ಕೆಲ ಶಾಸಕರಿಗೆ ಮಂತ್ರಿ ಮಾಡುವ ಆಸೆ ತೋರಿಸಿ ಹೋರಾಟದಿಂದ ದೂರ ಮಾಡಿದ್ದಾರೆ ಎಂಬ ಸ್ವಾಮೀಜಿ ಆರೋಪಕ್ಕೆ ಮಾತನಾಡಿ, ನಾನು ಮಾತ್ರ ಹೋರಾಟಕ್ಕೆ ಹೋಗುವೆ. ನಾನು ಹುಟ್ಟು ಹೋರಾಟಗಾರ. ಕೆಲವರು ಮಂತ್ರಿ ಆಸೆಯಿಂದ ಮಾತನಾಡುತ್ತಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ. ಹೋರಾಟಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು.
ಪಂಚಮಸಾಲಿ ಹೋರಾಟವನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂಬ ಆರೋಪ ವಿಚಾರಕ್ಕೆ ಮಾತನಾಡಿ, ಸಿಎಂ ಅವರು ಹೋರಾಟಕ್ಕೆ ಹೋಗಬೇಡ ಎಂದು ಹೇಳಬಹುದಿತ್ತು. ಆದರೆ, ಯಾರು ಕೂಡ ಹೋರಾಟಕ್ಕೆ ಹೋಗಬೇಡ ಎಂದು ಹೇಳಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಇಬ್ಬರು, ಮೂವರು ಆಕಾಂಕ್ಷಿಗಳಿದ್ದಾರೆ. ಈ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ, ಕೇವಲ ಮಾಧ್ಯಮದಲ್ಲಿ ಮಾತ್ರ ಬರುತ್ತಿದೆ. ಇದರ ಬಗ್ಗೆ ಮೀಟಿಂಗ್ ಕೂಡ ಆಗಿಲ್ಲ. ಇನ್ನೂ ಸಮಯ ತೆಗೆದುಕೋಳ್ಳುತ್ತದೆ. ಡಿಕೆ ಶಿವಕುಮಾರ್ ಅವರು ಸಚಿವರಾಗಿರುವ ಕಾರಣ ಕೆಲಸ ಮಾಡಲು ಕಷ್ಟವಾಗುತ್ತಿದೆ. ಒತ್ತಡ ಜಾಸ್ತಿ ಆಗಿರುವ ಕಾರಣ ಬದಲಾವಣೆ ಮಾಡಬಹುದು. ನಾವು ಹೇಳಿದವರನ್ನು ಹೈಕಮಾಂಡ್ ಮಾಡಲ್ಲ. ಅರ್ಹರನ್ನು ಕೆಪಿಸಿಸಿ ಅಧ್ಯಕ್ಷರನ್ನು ಮಾಡಲಾಗುತ್ತದೆ ಎಂದರು.