ಚಾಮರಾಜನಗರ: ಖೋ ಖೋ ಪಟು ಚೈತ್ರಾ ಅವರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಪ್ರಯತ್ನ ಮಾಡುವುದಾಗಿ ಸಂಸದ ಸುನಿಲ್ ಬೋಸ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ ಅವರು, "ನಿನ್ನೆ ನರಸೀಪುರದಲ್ಲಿ ಚೈತ್ರಾ ಅವರನ್ನು ಭೇಟಿ ಮಾಡಿ ಸನ್ಮಾನ ಮಾಡಿದೆ. ಈ ವೇಳೆ ಗ್ರಾಮಸ್ಥರು ಹೆಚ್ಚಿನ ಬಹುಮಾನ ಕೊಡಿಸಿ ಅಂತ ಬೇಡಿಕೆಯಿಟ್ಟರು. ಚೈತ್ರಾ ತನಗೆ ಸರ್ಕಾರಿ ಕೆಲಸ ಕೊಡಿಸಿ ಅಂತಾ ಕೇಳಿಕೊಂಡಿದ್ದು, ನಾನು ನಮ್ಮ ತಂದೆ ಜೊತೆಗೆ ಸರ್ಕಾರಿ ಕೆಲಸ ಕೊಡಿಸುವ ಬಗ್ಗೆ ಮಾತನಾಡುತ್ತೇನೆ. ಸರ್ಕಾರಿ ಉದ್ಯೋಗ ಕೊಡಿಸಲು ಪ್ರಯತ್ನ ಮಾಡುತ್ತೇನೆ" ಎಂದರು.
"ನರಸೀಪುರದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಲು ಈಗಾಗಲೇ ಜಾಗ ನೋಡುತ್ತಿದ್ದೇವೆ. ಆಗ ಸ್ಥಳೀಯ ಪ್ರತಿಭೆಗಳಿಗೆ ಅನುಕೂಲವಾಗುತ್ತದೆ. ಸಿಎಂ ಭೇಟಿ ಮಾಡಿ ಬಹುಮಾನ ಮೊತ್ತ ಹೆಚ್ಚು ಕೊಡಲು ಕೂಡ ಮನವಿ ಮಾಡುತ್ತೇನೆ" ಎಂದರು.
ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ: "ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದು, ಅವರೇ 5 ವರ್ಷ ಮುಂದುವರೆಯುತ್ತಾರೆ. ಶಾಸಕರ ಬೆಂಬಲ, ಹೈ ಕಮಾಂಡ್ ಬೆಂಬಲ ಇರುವ ತನಕ ಅವರೇ ಮುಖ್ಯಮಂತ್ರಿ. 2.5 ವರ್ಷ ಅಧಿಕಾರ ಹಂಚಿಕೆ ಎಂಬ ಒಪ್ಪಂದ ಆದಂತೆ ಕಾಣುತ್ತಿಲ್ಲ" ಎಂದು ಹೇಳಿದರು.
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕಾನೂನು : ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮಾತನಾಡಿ, "ಮೈಕ್ರೋ ಫೈನಾನ್ಸ್ನವರು ಯಾರು ಜನರ ಮೇಲೆ ದೌರ್ಜನ್ಯ ಎಸಗಿದ್ದಾರೆ, ಬಲವಂತವಾಗಿ ಹಣ ವಸೂಲಿಗೆ ಮುಂದಾಗಿದ್ದಾರೋ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಇದಕ್ಕೆ ಹೊಸ ಕಾನೂನು ತರಲೂ ವ್ಯವಸ್ಥೆ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ನಾಗಾಲೋಟಕ್ಕೆ ಬ್ರೇಕ್ ಹಾಕಲು ಶ್ರೀರಾಮುಲು ಸೆಳೆಯುವ ಯತ್ನ ಕುರಿತು ಮಾತನಾಡಿ, "ಇದೆಲ್ಲಾ ಊಹಾಪೋಹ ಅಷ್ಟೇ, ಹಿಂದೆ ಕರೆದಿದ್ದು ನಿಜ. ಈಗ ಕರೆದಿಲ್ವಲ್ಲ. ಅವರು ಬಂದಾಗ ನೋಡೋಣ" ಎಂದರು.
"ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ದಿನಾಂಕ ಬದಲಾವಣೆಯಾಗಿದೆ. ಫೆ.15ರ ಬದಲು ಫೆ.17 ರಂದು ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಫೆ.18 ರಂದು ಚಾಮರಾಜನಗರದಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ" ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಖೋ ಖೋ ವಿಶ್ವಕಪ್ ಚಾಂಪಿಯನ್ ಮೈಸೂರಿನ ಚೈತ್ರಾಗೆ ಹುಟ್ಟೂರಲ್ಲಿ ಭವ್ಯ ಸ್ವಾಗತ