ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು 'ಊಸರವಳ್ಳಿ'ಗೆ ಹೋಲಿಸಿರುವ ಕಾಂಗ್ರೆಸ್, ಅವರು ಮಾಡಿರುವ ದ್ರೋಹವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸಲ್ಲ ಎಂದು ಹೇಳಿದೆ. ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮತ್ತು ರಾಜ್ಯದಲ್ಲಿ ಮಹಾಘಟಬಂಧನ್ ಮೈತ್ರಿಕೂಟ ತೊರೆಯುವ ನಿತೀಶ್ ಕುಮಾರ್ ಅವರ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
"ಭಾರತ್ ಜೋಡೋ ನ್ಯಾಯ್ ಯಾತ್ರೆಯಿಂದ ಗಮನ ಬೇರೆಡೆಗೆ ಸೆಳೆಯಲು ರಾಜಕೀಯ ನಾಟಕ ಸೃಷ್ಟಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಶೀಘ್ರದಲ್ಲೇ ಬಿಹಾರ ಪ್ರವೇಶಿಸಲಿರುವ ರಾಹುಲ್ ಗಾಂಧಿಯವರ ಭಾರತ್ ಜೋಡೊ ನ್ಯಾಯ್ ಯಾತ್ರೆಯ ಬಗ್ಗೆ ಪ್ರಧಾನಿ ಮತ್ತು ಬಿಜೆಪಿಗೆ ಭಯವಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ." ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದರು.
"ಆಗಾಗ್ಗೆ ರಾಜಕೀಯ ಪಾಲುದಾರರನ್ನು ಬದಲಾಯಿಸುವ ನಿತೀಶ್ ಕುಮಾರ್, ಬಣ್ಣ ಬದಲಾಯಿಸುವಲ್ಲಿ ಊಸರವಳ್ಳಿಯನ್ನೂ ಮೀರಿಸುತ್ತಾರೆ" ಎಂದು ರಮೇಶ್ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ನಿತೀಶ್ ಕುಮಾರ್ ಅವರು ಭಾನುವಾರ ಬೆಳಗ್ಗೆ ರಾಜ್ಯಪಾಲ ರಾಜೇಂದ್ರ ವಿ ಅರ್ಲೇಕರ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ರಾಜ್ಯಪಾಲರು ಕುಮಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಮತ್ತು ಹೊಸ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಭಾನುವಾರ ಸಂಜೆಯ ವೇಳೆಗೆ ಬಿಜೆಪಿ ಬೆಂಬಲದೊಂದಿಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ.
ಹೊಸದಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಸಾಮ್ರಾಟ್ ಚೌಧರಿ ಉಪಮುಖ್ಯಮಂತ್ರಿಯಾಗಲಿದ್ದಾರೆ. ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಪಕ್ಷದ ಶಾಸಕಾಂಗದ ಉಪನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ಮತ್ತೊಬ್ಬ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರು ಖಚಿತಪಡಿಸಿದ್ದಾರೆ. ಚೌಧರಿ ಒಬಿಸಿ (ಇತರ ಹಿಂದುಳಿದ ವರ್ಗ) ಮತ್ತು ಸಿನ್ಹಾ ಮೇಲ್ಜಾತಿ ಭೂಮಿಹಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಬಿಹಾರ ರಾಜಕೀಯ ಬೆಳವಣಿಗೆಗಳ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, "ಮೈತ್ರಿ ಬದಲಾಯಿಸುವ ನಿತೀಶ್ ಅವರ ಉದ್ದೇಶದ ಬಗ್ಗೆ ಪಕ್ಷಕ್ಕೆ ಮೊದಲೇ ತಿಳಿದಿತ್ತು. ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಪಕ್ಷಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ." ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ; ಬಿಜೆಪಿ ಜೊತೆ ಹೊಸ ಸರ್ಕಾರ, ಸಂಜೆ ಪ್ರಮಾಣ