ಕೋಲ್ಕತಾ:ವಿದೇಶಿಗರ ಅಕ್ರಮ ಒಳನುಸುಳುವಿಕೆ ನಿಂತಾಗಲೇ ಪಶ್ಚಿಮ ಬಂಗಾಳದಲ್ಲಿ ಶಾಂತಿಯ ಮರುಸ್ಥಾಪನೆ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.
"2026 ರಲ್ಲಿ ನೀವು ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯನ್ನು ತಂದರೆ ಬಿಜೆಪಿ ರಾಜ್ಯದಲ್ಲಿ ಅಕ್ರಮ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ" ಎಂದು ಕೇಂದ್ರ ಗೃಹ ಸಚಿವರು ಉತ್ತರ 24 ಪರಗನ್ ಜಿಲ್ಲೆಯ ಪೆಟ್ರಾಪೋಲ್ನಲ್ಲಿ ಲ್ಯಾಂಡ್ ಪೋರ್ಟ್ನ ಹೊಸ ಪ್ರಯಾಣಿಕರ ಟರ್ಮಿನಲ್ ಕಟ್ಟಡ ಮತ್ತು ಮೈತ್ರಿ ದ್ವಾರವನ್ನು ಉದ್ಘಾಟಿಸಿ ಹೇಳಿದರು.
ಭ್ರಷ್ಟಾಚಾರದ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಚ್ಎಂ ಶಾ ತೀವ್ರ ವಾಗ್ದಾಳಿ ನಡೆಸಿದರು.
"ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಮಮತಾ ಬ್ಯಾನರ್ಜಿ ಏನು ಮಾಡಿದ್ದಾರೆ? ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ, ಪಶ್ಚಿಮ ಬಂಗಾಳಕ್ಕೆ 7.74 ಲಕ್ಷ ಕೋಟಿ ರೂ.ಗಳಷ್ಟು ಕೇಂದ್ರದ ನಿಧಿಯನ್ನು ನೀಡಲಾಗಿದೆ. ಇದು ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿರುವುದಕ್ಕಿಂತ ಹೆಚ್ಚಾಗಿದೆ. ಆದರೆ ದುರದೃಷ್ಟವಶಾತ್, ಪಶ್ಚಿಮ ಬಂಗಾಳದಲ್ಲಿ ಕೇಂದ್ರದ ನಿಧಿಯ ಬಳಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ" ಎಂದು ಕೇಂದ್ರ ಗೃಹ ಸಚಿವರು ಹೇಳಿದರು.