ನವದೆಹಲಿ: ಉತ್ತರಾಖಂಡ ರಾಜ್ಯದ ಪರವಾನಗಿ ಪ್ರಾಧಿಕಾರವು ಏಪ್ರಿಲ್ನಲ್ಲಿ ಉತ್ಪಾದನಾ ಪರವಾನಗಿಗಳನ್ನು ಅಮಾನತುಗೊಳಿಸಿದ್ದ ತನ್ನ ಕಂಪನಿಯ 14 ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿರುವುದಾಗಿ ಪತಂಜಲಿ ಆಯುರ್ವೇದ ಲಿಮಿಟೆಡ್ ಮಂಗಳವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಈ ಉತ್ಪನ್ನಗಳನ್ನು ಮಾರಾಟ ಮಾಡದಂತೆ ತನ್ನ 5,606 ಫ್ರ್ಯಾಂಚೈಸ್ ಅಂಗಡಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಕಂಪನಿಯು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರ ನ್ಯಾಯಪೀಠಕ್ಕೆ ತಿಳಿಸಿದೆ.
ಈ 14 ಉತ್ಪನ್ನಗಳ ಯಾವುದೇ ರೂಪದಲ್ಲಿರುವ ಜಾಹೀರಾತುಗಳನ್ನು ಕೂಡ ಹಿಂತೆಗೆದುಕೊಳ್ಳುವಂತೆ ಮಾಧ್ಯಮ ವೇದಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅದು ಹೇಳಿದೆ. ಜಾಹೀರಾತುಗಳನ್ನು ತೆಗೆದುಹಾಕಲು ಮಾಡಿದ ಮನವಿಯನ್ನು ಆಯಾ ಸಾಮಾಜಿಕ ಮಾಧ್ಯಮ ವೇದಿಕೆಗಳು ಸ್ವೀಕರಿಸಿವೆಯೇ ಎಂಬ ಬಗ್ಗೆ ಮತ್ತು ಈ 14 ಉತ್ಪನ್ನಗಳ ಜಾಹೀರಾತುಗಳನ್ನು ಹಿಂತೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಎರಡು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಪೀಠ ಪತಂಜಲಿ ಆಯುರ್ವೇದ ಲಿಮಿಟೆಡ್ಗೆ ಈ ಸಂದರ್ಭದಲ್ಲಿ ನಿರ್ದೇಶನ ನೀಡಿತು.
ನ್ಯಾಯಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 30 ಕ್ಕೆ ಮುಂದೂಡಿತು. ಕೋವಿಡ್ ಲಸಿಕಾ ಅಭಿಯಾನ ಮತ್ತು ಮತ್ತು ಆಧುನಿಕ ವೈದ್ಯ ಪದ್ಧತಿಗಳ ವಿರುದ್ಧ ಪತಂಜಲಿ ಕಂಪನಿಯು ದುರುದ್ದೇಶದ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.