Arshadeep New T20I Record: ದಕ್ಷಿಣ ಆಫ್ರಿಕಾ (South Africa) ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತದ ಯುವ ವೇಗಿ ಅರ್ಷದೀಪ್ (Arshdeep) ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಭುವನೇಶ್ವರ್ ಕುಮಾರ್ (Bhuvaneshwar Kumar) ಅವರ ದಾಖಲೆಗಳನ್ನು ಮುರಿದಿದ್ದಾರೆ.
India vs south Africa Highlights: ಬುಧವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ (Team India) 20 ಓವರ್ಗಳಲ್ಲಿ 219 ರನ್ಗಳನ್ನು ಕಲೆಹಾಕಿತು. ತಿಲಕ್ ವರ್ಮಾ (Tilak Varma) ಮತ್ತು ಅಭಿಷೇಕ್ ಶರ್ಮಾ (Abhishek Sharma) ಭರ್ಜರಿ ಪ್ರದರ್ಶನ ತೋರಿದರು. ತಿಲಕ್ ವರ್ಮಾ 56 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸ್ ಸಹಾಯದಿಂದ 107 ರನ್ ಸಿಡಿಸಿದರೆ, ಅಭಿಷೇಕ್ ಶರ್ಮಾ 25 ಎಸೆತಗಳನ್ನು ಎದುರಿಸಿ 3 ಬೌಂಡರಿ ಮತ್ತು 5 ಸಿಕ್ಸರ್ ಮೂಲಕ 50 ರನ್ ಪೇರಿಸಿದರು. ಈ ಇಬ್ಬರ ಬ್ಯಾಟಿಂಗ್ ಬಲದಿಂದ ಭಾರತ ಬಹೃತ್ ಮೊತ್ತ ಕಲೆ ಹಾಕಿತು.
ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 208 ರನ್ಗಳಿಸಲಷ್ಟೇ ಶಕ್ತವಾಯಿತು. ಪವರ್ ಪ್ಲೇನ ಆರಂಭಿಕ ಎರಡು ಓವರ್ನಲ್ಲಿ ಬ್ಯಾಟ್ ಬೀಸುತ್ತಿದ್ದ ಆಫ್ರಿಕನ್ನರ ಓಟಕ್ಕೆ ಅರ್ಷದೀಪ್ ಬ್ರೇಕ್ ಹಾಕಿದರು. ರಿಕಿಲ್ಟನ್ ವಿಕೆಟ್ ಪಡೆದು ಆಫ್ರಿಕಾದ ಮೇಲೆ ಒತ್ತಡ ಹೇರಿದರು. ಬಳಿಕ ಹೆಂಡ್ರಿಕ್ಸ್ (21), ಮಾಕ್ರಮ್ (29), ಟ್ರಿಸ್ಟನ್ ಸ್ಟಬ್ಸ್ (12) ಅಲ್ಪ ರನ್ಗೆ ಕ್ರೀಸ್ ತೊರೆದರು. ಈ ವೇಳೆ ಬ್ಯಾಟಿಂಗ್ ಬಂದ ಹೆನ್ರಿಚ್ ಕ್ಲಾಸೆನ್ ಸ್ಪೋಟಕ ಪ್ರದರ್ಶನ ತೋರಲು ಮುಂದಾದರು. 22 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸ್ನೊಂದಿಗೆ 41 ರನ್ ಚಚ್ಚಿದ್ದರು. ಅರ್ಷದೀಪ್ ತಮ್ಮ 17ನೇ ಓವರ್ನ 4ನೇ ಎಸೆತದಲ್ಲಿ ಕ್ಲಾಸೆನ್ ವಿಕೆಟ್ ಕಿತ್ತರು.
ಮತ್ತೊಂದೆಡೆ, ಮಾರ್ಕೊ ಜಾನ್ಸೆನ್ ಕೂಡ ಅಬ್ಬರಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಬೇಕೆಂದು ಪಣ ತೊಟ್ಟಿದ್ದ ಜಾನ್ಸೆನ್, ಬಿರುಸಿನ ಬ್ಯಾಟಿಂಗ್ ಮೂಲಕ ವೇಗದ ಅರ್ಧಶತಕ ಸಿಡಿಸಿದರು. 17 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ಗೆಲುವಿಗೆ ಕೊನೆಯ ಓವರ್ನಲ್ಲಿ 24 ರನ್ಗಳು ಬೇಕಿತ್ತು. ಕೊನೆಯ ಓವರ್ ಬೌಲಿಂಗ್ ಮಾಡಿದ ಅರ್ಷದೀಪ್ 3ನೇ ಎಸೆತದಲ್ಲಿ ಜಾನ್ಸೆನ್ ವಿಕೆಟ್ ಉರುಳಿಸಿ 13 ರನ್ ಬಿಟ್ಟುಕೊಟ್ಟು ಭಾರತವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಹೊಸ ದಾಖಲೆಯನ್ನೂ ಬರೆದರು.
ಬುಮ್ರಾ, ಭುವನೇಶ್ವರ್ ದಾಖಲೆ ಭಗ್ನ: ಈ ಪಂದ್ಯದಲ್ಲಿ 3 ವಿಕೆಟ್ ಪಡೆದ ಅರ್ಷದೀಪ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಕಡಿಮೆ ಇನ್ನಿಂಗ್ಸ್ನಲ್ಲಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. ಅರ್ಷದೀಪ್ ಒಟ್ಟು 59 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿ ಒಟ್ಟು 92 ವಿಕೆಟ್ಗಳನ್ನು ಪಡೆದಿದ್ದಾರೆ.
ಭುವನೇಶ್ವರ್ ಕುಮಾರ್ ಒಟ್ಟು 87 ಟಿ20 ಪಂದ್ಯಗಳನ್ನಾಡಿ ಅದರಲ್ಲಿ 90 ವಿಕೆಟ್ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ 70 ಪಂದ್ಯಗಳನ್ನಾಡಿ 89 ವಿಕೆಟ್ ಉರುಳಿಸಿದ್ದಾರೆ. ಇದೀಗ ಅರ್ಷದೀಪ್ ಈ ಇಬ್ಬರು ಬೌಲರ್ಗಳನ್ನು ಹಿಂದಿಕ್ಕಿದ್ದಾರೆ.
5 ವಿಕೆಟ್ ಬಾಕಿ: ಈ ಪಟ್ಟಿಯಲ್ಲಿ ಯುಜ್ವೇಂದ್ರ ಚಹಾಲ್ (Yuzvendra Chahal) ಅಗ್ರ ಸ್ಥಾನದಲ್ಲಿದ್ದಾರೆ. ಇವರು ಒಟ್ಟು 80 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಈ ಅವಧಿಯಲ್ಲಿ 96 ವಿಕೆಟ್ ಪಡೆದಿದ್ದಾರೆ. ಅರ್ಷದೀಪ್ ಇನ್ನೂ 5 ವಿಕೆಟ್ ಪಡೆದರೆ ಚಹಾಲ್ ದಾಖಲೆ ಮುರಿದು ಅಗ್ರ ಸ್ಥಾನಕ್ಕೇರಲಿದ್ದಾರೆ.
ಇದನ್ನೂ ಓದಿ: IND vs SA T20: ಚೊಚ್ಚಲ ಶತಕ ಸಿಡಿಸಿ ದಾಖಲೆ ಬರೆದ ತಿಲಕ್ ವರ್ಮಾ: ಈ ಸಾಧನೆ ಮಾಡಿದ 4ನೇ ಭಾರತೀಯ!