ದ್ರಾಸ್(ಲಡಾಖ್):ಪಾಕಿಸ್ತಾನ ಇತಿಹಾಸದಿಂದ ಇನ್ನೂ ಯಾವುದೇ ಪಾಠ ಕಲಿತಿಲ್ಲ. ಭಯೋತ್ಪಾದನೆ ಮತ್ತು ನಕಲಿ ಯುದ್ಧದ ನೆರವಿನಿಂದಲೇ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ಇಂದು ಕಾರ್ಗಿಲ್ ವಿಜಯದ 25ನೇ ವರ್ಷಾಚರಣೆ ನಿಮಿತ್ತ ಪ್ರಧಾನಿ ಮೋದಿ, ಕಣಿವೆ ನಾಡು ಲಡಾಖ್ನ ದ್ರಾಸ್ನಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ಕೆಚ್ಚೆದೆಯ ಯೋಧರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಪಾಕಿಸ್ತಾನದ ವಿರುದ್ಧ 'ಆಪರೇಷನ್ ವಿಜಯ್' ಹೆಸರಲ್ಲಿ ನಡೆದ ಯುದ್ಧದಲ್ಲಿ ಭಾರತ ವಿಜಯ ಪತಾಕೆ ಹಾರಿಸಿತ್ತು. ಈ ಯುದ್ಧದಲ್ಲಿ 500ಕ್ಕೂ ಹೆಚ್ಚು ಭಾರತೀಯ ಯೋಧರು ಪ್ರಾಣತ್ಯಾಗ ಮಾಡಿದ್ದರು.
''ಇಂದು ಕಾರ್ಗಿಲ್ ವಿಜಯದ 25 ವರ್ಷಗಳಿಗೆ ಮಹಾನ್ ಭೂಮಿ ಲಡಾಖ್ ಸಾಕ್ಷಿಯಾಗಿದೆ. ದೇಶಕ್ಕಾಗಿ ಮಾಡಿದ ಅವರ ತ್ಯಾಗ ಎಂದಿಗೂ ಅಮರ ಎಂದು ಕಾರ್ಗಿಲ್ ವಿಜಯ್ ದಿವಸ್ ಹೇಳುತ್ತದೆ. ನಮ್ಮ ಸೇನೆಯ ವೀರ ಸೈನಿಕರಿಗೆ ಈ ದೇಶ ಸದಾ ಋಣಿಯಾಗಿರುತ್ತದೆ. ಹುತಾತ್ಮರಿಗೆ ದೇಶ ಆಭಾರಿಯಾಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾನು ನಮ್ಮ ಸೈನಿಕರ ನಡುವೆ ಒಬ್ಬ ಸಾಮಾನ್ಯ ದೇಶವಾಸಿಯಾಗಿದ್ದೆ ಎಂಬುದು ನನ್ನ ಅದೃಷ್ಟ'' ಎಂದು ಮೋದಿ ಹೇಳಿದರು.
ಇದನ್ನೂ ಓದಿ:ಕಾರ್ಗಿಲ್ ವಿಜಯಕ್ಕೆ 25 ವರ್ಷ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರಿಗೆ ಪ್ರಧಾನಿ ಮೋದಿ ನಮನ
''ಆ ಸಂದರ್ಭದಲ್ಲಿ ಭಾರತ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮತ್ತೊಮ್ಮೆ ತನ್ನ ಕೆಟ್ಟ ಮುಖವನ್ನು ತೋರಿಸಿತ್ತು. ಆದಾಗ್ಯೂ, ಸುಳ್ಳು ಮತ್ತು ಭಯೋತ್ಪಾದನೆಯನ್ನು ಸತ್ಯದಿಂದಲೇ ಸೋಲಿಸಲಾಯಿತು. ಪ್ರತಿ ಬಾರಿ ಪಾಕಿಸ್ತಾನ ಏನಾದರೊಂದು ಕೆಟ್ಟದ್ದನ್ನೇ ಮಾಡಲು ಪ್ರಯತ್ನಿಸಿದಾಗ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಈ ಹಿಂದೆಯೂ ನೀಡಲಾಗಿತ್ತು. ಆದರೆ, ಪಾಕಿಸ್ತಾನ ತನ್ನ ಇತಿಹಾಸದಿಂದ ಯಾವುದೇ ಪಾಠ ಕಲಿತಿಲ್ಲ'' ಎಂದು ವಾಗ್ದಾಳಿ ನಡೆಸಿದರು.
''ಪಾಕಿಸ್ತಾವು ಭಯೋತ್ಪಾದನೆ ಮತ್ತು ನಕಲಿ ಯುದ್ಧದ ನೆರವಿನಿಂದ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆ ಭಯೋತ್ಪಾದನೆಯನ್ನು ಪೋಷಿಸುತ್ತಿರುವವರೆಗೆ ತಮ್ಮ ನೀಚ ತಂತ್ರಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳ ಬಯಸುತ್ತೇನೆ'' ಎಂದು ಪ್ರಧಾನಿ ಮೋದಿ ಎಚ್ಚರಿಕೆಯ ಸಂದೇಶ ರವಾನಿಸಿದರು.
ಮುಂದುವರೆದು ಮಾತನಾಡಿ, ''ನಮ್ಮ ಕೆಚ್ಚೆದೆಯ ಯೋಧರು ಭಯೋತ್ಪಾದನೆಯನ್ನು ಹತ್ತಿಕ್ಕುತ್ತಾರೆ. ಶತ್ರುಗಳಿಗೆ ತಕ್ಕ ಉತ್ತರ ನೀಡುತ್ತಾರೆ. ಲಡಾಖ್, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯಲ್ಲಿನ ಪ್ರತಿಯೊಂದು ಅಡೆತಡೆಗಳನ್ನೂ ಭಾರತ ತೊಡೆದುಹಾಕಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಆಗಸ್ಟ್ 5ಕ್ಕೆ 370ನೇ ವಿಧಿ ರದ್ದಾಗಿ 5 ವರ್ಷವಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಹೊಸ ಭವಿಷ್ಯ, ದೊಡ್ಡ ಕನಸುಗಳ ಬಗ್ಗೆ ಮಾತನಾಡುತ್ತಿದೆ. ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಲಡಾಕ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಕ್ಷೇತ್ರವೂ ವೇಗವಾಗಿ ಬೆಳೆಯುತ್ತಿದೆ'' ಎಂದು ತಿಳಿಸಿದರು.
ಇದನ್ನೂ ಓದಿ:ಯೋಧರ ಶೌರ್ಯ ಸ್ಮರಿಸಿದ ರಾಷ್ಟ್ರಪತಿ; ದ್ರಾಸ್ ಯುದ್ಧ ಸ್ಮಾರಕದಲ್ಲಿ ಸೈನಿಕರ ಕುಟುಂಬಸ್ಥರಿಂದ ನಮನ