ಹೈದರಾಬಾದ್: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೈದರಾಬಾದ್‌ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದರು. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ಹೈದರಾಬಾದ್ ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ ಒವೈಸಿ, ಸ್ಪೋಟದ ಸಂತ್ರಸ್ತರಿಗೆ ಸಾಂತ್ವನ ಸೂಚಿಸಿದರು. ಬೆಂಗಳೂರು ಸ್ಪೋಟದ ಘಟನೆಯನ್ನು ಖಂಡಿಸಿದ ಓವೈಸಿ, ಕೆಫೆಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಸ್ಥಳದ ಹೆಸರನ್ನಿಟ್ಟಿರುವುದನ್ನು ಸ್ಮರಿಸಿದರು.
"ಸ್ಫೋಟದ ಸಂತ್ರಸ್ತರ ಸಂಕಷ್ಟದಲ್ಲಿ ಭಾಗಿಯಾಗಿರುವುದನ್ನು ಸೂಚಿಸಲು ಹೈದರಾಬಾದ್‌ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದೇನೆ. ಇಲ್ಲಿನ ಆಹಾರ ತುಂಬಾ ರುಚಿಕಟ್ಟಾಗಿದೆ ಮತ್ತು ಈ ಕೆಫೆಗೆ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಸ್ಥಳದ ಹೆಸರನ್ನು ಇಡಲಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ರಾಮೇಶ್ವರಂ ಕೆಫೆ ಮೇಲೆ ದಾಳಿ ನಡೆಸಿದ್ದು ಹೇಡಿತನದ ಕೃತ್ಯ ಮತ್ತು ಅದು ಭಾರತದ ಮೌಲ್ಯಗಳ ಮೇಲಿನ ದಾಳಿ" ಎಂದು ಓವೈಸಿ 'ಎಕ್ಸ್' ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಹೋಟೆಲ್ನಲ್ಲಿ ರುಚಿಕರವಾದ ಊಟ ಸವಿದ ಒವೈಸಿ, ಹೋಟೆಲ್ಗೆ ಬಂದಿದ್ದ ಕೆಲ ಗ್ರಾಹಕರೊಂದಿಗೆ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ಬೆಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರಾಮೇಶ್ವರಂ ಕೆಫೆ ಸ್ಫೋಟದ ಗಾಯಾಳುಗಳನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ, ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.