ಮೈಸೂರು: ಎಟಿಎಂಗೆ ಹಣ ತುಂಬದೇ, ಹಾಗೆಯೇ ತೆಗೆದುಕೊಂಡು ಹೋದ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಕ್ಷಯ್ ಕುಮಾರ್ ಹಾಗೂ ತೇಜಸ್ವಿ ಎಂಬವರ ವಿರುದ್ಧ ಜಿಲ್ಲೆಯ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಎಲ್ ಎಂಟರ್‌ಪ್ರೈಸಸ್ ಎಜೆನ್ಸಿಯು ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ ಹಣ ತುಂಬುವ ಟೆಂಡರ್ ಪಡೆದಿತ್ತು. ಈ ಏಜೆನ್ಸಿಯಲ್ಲಿ ಅಕ್ಷಯ್ ಕುಮಾರ್ ಹಾಗೂ ತೇಜಸ್ವಿ ಕೆಲಸ ಮಾಡುತ್ತಿದ್ದರು. ಗದ್ದಿಗೆ ಗ್ರಾಮದ ಎಟಿಎಂಗೆ ಹಣ ತುಂಬಲು ಇಬ್ಬರನ್ನು ಕಳುಹಿಸಲಾಗಿತ್ತು. ಈ ವೇಳೆ ಇಬ್ಬರು 5 ಲಕ್ಷದ 80 ಸಾವಿರ ರೂ. ಹಣವನ್ನು ಎಟಿಎಂಗೆ ತುಂಬದೆ, ಅದನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಜೆನ್ಸಿ ಆಡಿಟ್ನಲ್ಲಿ ಇಬ್ಬರು ಹಣ ತೆಗೆದುಕೊಂಡು ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರ ವಿರುದ್ದ ಏಜೆನ್ಸಿಯವರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇನ್ನು ಇಬ್ಬರು ಆರೋಪಿಗಳು ಚಿನ್ನದ ಅಂಗಡಿಗೆ ಹೋಗಿ ಕದ್ದ ಹಣದಲ್ಲಿ ಚಿನ್ನ ಖರೀದಿ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪ್ರತಿಕ್ರಿಯಿಸಿ, ''ಈ ಬಗ್ಗೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ'' ಎಂದು ತಿಳಿಸಿದರು.
ಮಂಗಳೂರಿನ ಬ್ಯಾಂಕ್‌ನಲ್ಲಿ ಗನ್ ತೋರಿಸಿ 4 ಕೋಟಿ ಲೂಟಿ: ನಿನ್ನೆ(ಶುಕ್ರವಾರ) ಮಂಗಳೂರು ನಗರದ ಹೊರವಲಯದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಹಾಡಹಗಲೇ ಗನ್ ತೋರಿಸಿ 4 ಕೋಟಿ ದರೋಡೆ ಮಾಡಲಾಗಿತ್ತು. ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:30ರ ನಡುವೆ ಶಸ್ತ್ರಸಜ್ಜಿತ ಮುಸುಕುಧಾರಿಗಳ ತಂಡದಿಂದ ಕೃತ್ಯ ನಡೆದಿತ್ತು.
ಸುಮಾರು 25 ರಿಂದ 35 ವರ್ಷ ವಯಸ್ಸಿನ ಐದಾರು ಜನರ ತಂಡ ಮುಖಕ್ಕೆ ಮಾಸ್ಕ್ ಧರಿಸಿ, ಪಿಸ್ತೂಲ್, ತಲ್ವಾರ್ ಮತ್ತು ಚಾಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬ್ಯಾಂಕ್‌ಗೆ ಪ್ರವೇಶಿಸಿದ್ದರು. ಈ ವೇಳೆ 5 ಮಂದಿ ಉದ್ಯೋಗಿಗಳು ಬ್ಯಾಂಕಿನಲ್ಲಿದ್ದರು. ಆ ಬಳಿಕ ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿ ದರೋಡೆ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದರು.
ಈ ಬಗ್ಗೆ ಮಾಹಿತಿ ನೀಡಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, "ಹಿಂದಿಯಲ್ಲಿ ಮಾತನಾಡುತ್ತಿದ್ದ ಆರೋಪಿಗಳು, ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಕಪಾಟನ್ನು ತೆರೆಸಿ, ದರೋಡೆ ಮಾಡಿದ್ದಾರೆ. ಕದ್ದ ವಸ್ತುಗಳ ಮೌಲ್ಯ 4 ಕೋಟಿಗಳಷ್ಟಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಆದರೂ ವಿವರವಾದ ಮೌಲ್ಯಮಾಪನಗಳು ನಡೆಯುತ್ತಿವೆ" ಎಂದು ತಿಳಿಸಿದ್ದರು.
ಇದನ್ನೂ ಓದಿ: ಬೀದರ್ ದರೋಡೆ ಪ್ರಕರಣದಲ್ಲಿ ಅಮಿತ್ ಕುಮಾರ್ ಕೈವಾಡ ಶಂಕೆ: ತೆಲಂಗಾಣ ಪೊಲೀಸ್