ದಾವಣಗೆರೆ: ನಿಮಗೆ ಸೇರಿರುವ ಮನೆ, ಕಟ್ಟಡ, ನಿವೇಶನ ಹಾಗೂ ಎಲ್ಲೆಂದರಲ್ಲಿ ಬೃಹತ್ ಜಾಹೀರಾತು ಫಲಕ ಹಾಕಿದ್ದೀರಾ? ಅದನ್ನು ಮೊದಲು ತೆರವು ಮಾಡಿ. ಅಥವಾ ಜಾಹೀರಾತು ಫಲಕ ಅಳವಡಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ಮೊದಲು ಆ ಆಲೋಚನೆಯನ್ನು ಅಷ್ಟಕ್ಕೆ ಕೈಬಿಡಿ!
ಹೀಗೊಂದು ಎಚ್ಚರಿಕೆಯ ಸಂದೇಶ ದಾವಣಗೆರೆ ಮಹಾನಗರ ಪಾಲಿಕೆಯಿಂದ ಬಂದಿದ್ದು, ಪಾಲಿಕೆ ಅನುಮತಿ ಇಲ್ಲದೇ ಹಾಕಲಾಗಿದ್ದ ಹಾಗೂ ನಗರದ ಅಂದಗೆಡಿಸುತ್ತಿರುವ ಅನಧಿಕೃತ ಬೃಹತ್ ಫ್ಲೆಕ್ಸ್, ಹೋರ್ಡಿಂಗ್, ಬಂಟಿಂಗ್ಸ್, ಜಾಹೀರಾತು ಫಲಕಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.
ನಗರದ ಗುಂಡಿ ವೃತ್ತ, ಜಯದೇವ ವೃತ್ತ, ಅಂಬೇಡ್ಕರ್ ವೃತ್ತ, ಹದಡಿ ರಸ್ತೆ ಸೇರಿದಂತೆ ಇತರಡೆ ಕಾರ್ಯಾಚರಣೆಗೆ ಇಳಿದ ಆಯುಕ್ತೆ ರೇಣುಕಾ ನೇತೃತ್ವದ ಪಾಲಿಕೆ ಅಧಿಕಾರಿಗಳು, ಅನಧಿಕೃತವಾಗಿ ಹಾಕಲಾಗಿದ್ದ ಫ್ಲೆಕ್ಸ್, ಜಾಹೀರಾತು ಫಲಕಗಳನ್ನು ಪೊಲೀಸ್ ಬಂದೋಬಸ್ತ್ನೊಂದಿಗೆ ಕಿತ್ತೆಸೆದರು.
ಫ್ಲೆಕ್ಸ್, ಬಂಟಿಂಗ್, ಜಾಹೀರಾತು ಫಲಕ ನಗರದ ಅಂದವನ್ನು ಹಾಳು ಮಾಡುತ್ತಿವೆ ಎಂದು ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಡಾ.ಗಂಗಾಧರ್ ಸ್ವಾಮಿ ಪತ್ರ ಬರೆದಿದ್ದಲ್ಲದೇ, ಅವುಗಳನ್ನು ತಕ್ಷಣ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಹೀಗಾಗಿ, ಈ ಕಾರ್ಯಾಚರಣೆ ನಡೆಸಲಾಗಿದೆ. ಹದಡಿ ರಸ್ತೆಯಲ್ಲಿ ಅಳವಡಿಸಿದ್ದ ಸೂಚನಾ ಫಲಕ ಹಾಗೂ ಬೃಹತ್ ಜಾಹೀರಾತು ಫಲಕಗಳನ್ನು ಗ್ಯಾಸ್ ಕಟರ್ ಮೂಲಕ ಕತ್ತರಿಸಿ ವಶಕ್ಕೆ ಪಡೆದರು. ಕ್ರೇನ್, ಜೆಸಿಬಿಗಳ ಘರ್ಜನೆ ಕೂಡ ಜೋರಾಗಿತ್ತು.
ಪಾಲಿಕೆಯಿಂದ ಪಡೆದಿಲ್ಲ ಅನುಮತಿ: ''ನಗರದ ಅಂದವನ್ನು ಹಾಳುಗೆಡವುತ್ತಿರುವ ಜಾಹೀರಾತು ಫಲಕಗಳನ್ನು ತೆರವು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರಿಂದ ಪಾಲಿಕೆಯಿಂದ ಎಲ್ಲ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವು ಕಾರ್ಯ ನಡೆಸಲಾಗಿದೆ. ಅನಧಿಕೃತವಾಗಿ ಅಳವಡಿಸಿರುವ ಜಾಹೀರಾತು ಫಲಕ ತೆರವಿಗೆ ಸರ್ಕಾರದ ಆದೇಶ ಇದೆ. ಎಲ್ಲೆಂದರಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಸುವುದರಿಂದ ಅಪಘಾತದಂತಹ ತೊಂದರೆ ಆಗುತ್ತಿವೆ. ಜಿಎಸ್ಟಿ ಬಂದಾದ ಬಳಿಕ ಜಾಹೀರಾತು ತೆರಿಗೆ ತೆಗೆದುಕೊಳ್ಳುವಂತಿಲ್ಲ. ಬೈಲಾ ಮಾಡಿ ಅದರಲ್ಲಿ ನೆಲ ಬಾಡಿಗೆ ಒಂದು ದರ ನಿಗದಿಪಡಿಸಬೇಕಾಗುತ್ತದೆ. ಅದನ್ನು ಪಾಲಿಕೆ ಜನರಲ್ ಬಾಡಿ ಸಭೆಯಲ್ಲಿ ಇಟ್ಟಿದ್ದೇವೆ. ಇನ್ನೂ ಅಪ್ರೂವಲ್ ಆಗಿಲ್ಲ. ಹೀಗಿದ್ದಾಗ ನಾವು ಅನುಮತಿ ಇಲ್ಲದಿದ್ದರೂ ಅನಧಿಕೃತವಾಗಿ ಅಳವಡಿಸಿದ್ದ ಫ್ಲೆಕ್ಸ್, ಬಂಟಿಂಗ್ಸ್ ತೆರವು ಮಾಡುತ್ತಿದ್ದೇವೆ'' ಎಂದು ಆಯುಕ್ತೆ ರೇಣುಕಾ ಮಾಹಿತಿ ನೀಡಿದರು.
ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಕಾನೂನು ಕ್ರಮ: ''ಪಾಲಿಕೆ ಅನುಮತಿ ಪಡೆಯದೆ, ಪರವಾನಿಗೆ ನವೀಕರಣ ಮಾಡದೆ ಇದ್ದವರ ಜಾಹೀರಾತು ಫಲಕ, ಹೋರ್ಡಿಂಗ್ಸ್, ಬಂಟಿಂಗ್ಸ್ ತೆರವುಗೊಳಿಸುವ ಕಾರ್ಯಾಚರಣೆ ಮಾಡಿದ್ದೇವೆ. ಪಾಲಿಕೆ ಆಯುಕ್ತರ ಆದೇಶದ ಮೇರೆಗೆ ಮಾಡಿದ್ದೇವೆ, ಹದಿಡಿ ರಸ್ತೆಯೊಂದರಲ್ಲಿ 40-50 ಬೋರ್ಡ್ಗಳನ್ನು ತೆರವುಗೊಳಿಸಲಾಗಿದೆ. ಒತ್ತಡ ಬಂದರೂ ಲೆಕ್ಕಕ್ಕೆ ತೆಗೆದುಕೊಳ್ಳದೆ, ತೆರವು ಮಾಡಿದ್ದೇವೆ'' ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಪಾಲಿಕೆ ಅಧಿಕಾರಿ ಗೋವಿಂದ ರಾಜ್ ಅವರು ಮಾಹಿತಿ ನೀಡಿದ್ದಾರೆ.