ನವದೆಹಲಿ:ಜಾತಿ ನಿಂದನೆ, ಭೂಮಿ, ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ವಿವಾದಗಳು ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ (ಎನ್‌ಸಿಎಸ್‌ಸಿ) 47 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ.
ಮಾಹಿತಿ ಹಕ್ಕು ಕಾಯ್ದೆಯಡಿ ಈ ವಿವರ ಲಭ್ಯವಾಗಿದ್ದು, ಇದರಲ್ಲಿ ಜಾತಿ ನಿಂದನೆಯ ಪ್ರಕರಣಗಳು ಹೆಚ್ಚಿವೆ. ನಂತರದಲ್ಲಿ ಭೂ ವಿವಾದ, ಸರ್ಕಾರಿ ಉದ್ಯೋಗಿಗಳ ವ್ಯಾಜ್ಯಗಳು ಬಂದಿವೆ. ನಾಲ್ಕು ವರ್ಷಗಳ ಪೈಕಿ 2020-21 ರಲ್ಲಿ 11,917 ದೂರುಗಳು, 2021-22 ರಲ್ಲಿ 13,964 ದೂರುಗಳು, 2022-23 ರಲ್ಲಿ 12,402 ಮತ್ತು 2024 ರಲ್ಲಿ 9,550 ದೂರುಗಳು ದಾಖಲಾಗಿವೆ.
ಸಹಾಯವಾಣಿಗೂ ದೂರುಗಳ ಸುರಿಮಳೆ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯಗಳ ಕುರಿತು ರಾಷ್ಟ್ರೀಯ ಸಹಾಯವಾಣಿಗೂ ದೂರುಗಳ ಸುರಿಮಳೆಯಾಗಿದೆ. ಅಂಕಿಅಂಶಗಳ ಪ್ರಕಾರ, ಈವರೆಗೆ 6,02,177 ಕರೆಗಳು ಬಂದಿವೆ. ಈ ಪೈಕಿ 1,784 ಇತ್ಯರ್ಥಗೊಂಡಿದ್ದರೆ, 5,843 ಬಾಕಿ ಇವೆ. 13 ರಾಜ್ಯಗಳಿಂದ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಉತ್ತರ ಪ್ರದೇಶದಿಂದ ಅತಿ ಹೆಚ್ಚು ದೂರುಗಳು ಬಂದಿವೆ. 3,10,623 ಈ ರಾಜ್ಯದಿಂದ ಬಂದಿವೆ. ಬಳಿಕ ರಾಜಸ್ಥಾನದಿಂದ 8,651 (ಶೇ. 16.75) ಮತ್ತು ಮಧ್ಯಪ್ರದೇಶದಿಂದ 7,732 (ಶೇ. 14.97) ದೂರುಗಳು ಬಂದಿವೆ.