ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು 'ವಿಕಸಿತ ಭಾರತ' ಹೆಸರಿನಲ್ಲಿ ದೇಶ, ವಿದೇಶದ ಭಾರತೀಯರ ಜೊತೆಗೆ ಸಂಪರ್ಕ ಸಾಧಿಸುತ್ತಿರುವ ವಾಟ್ಸ್ಆ್ಯಪ್ ಸಂದೇಶದ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರತಿಪಕ್ಷಗಳು ಚುನಾವಣಾ ಆಯೋಗದ ಗಮನ ಸೆಳೆದಿವೆ.
ಕೇಂದ್ರ ಸರ್ಕಾರ ಅನಧಿಕೃತವಾಗಿ ಜನರ ಸಂಪರ್ಕ ಸಂಖ್ಯೆಗೆ ವಿಕಸಿತ ಭಾರತದ ಸಂದೇಶವನ್ನು ವಾಟ್ಸ್ಆ್ಯಪ್ ಮೂಲಕ ರವಾನಿಸುತ್ತಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಿಂದ ಮಾಹಿತಿ ಪಡೆದು ಮೆಸೇಜ್ ಕಳುಹಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದರ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿವೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ವಿದೇಶದಲ್ಲಿ ವಾಸಿಸುವ ವ್ಯಕ್ತಿಯೊಬ್ಬರಿಗೆ ಪ್ರಧಾನ ಮಂತ್ರಿ ಹೆಸರಿನಲ್ಲಿ ಕಳುಹಿಸಿರುವ ವಿಕಸಿತ ಭಾರತ ಸಂದೇಶವನ್ನು ಪ್ರಸ್ತಾಪಿಸಿ, ಈ ಸಂದೇಶವನ್ನು ಸ್ವೀಕರಿಸಿದ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ. ಬಿಜೆಪಿಯು ತನ್ನ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಸರ್ಕಾರಿ ಯಂತ್ರ ಮತ್ತು ಸರ್ಕಾರಿ ದತ್ತಾಂಶಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದಾರೆ.
ಐಟಿ ಇಲಾಖೆಯಿಂದ ಸಂದೇಶ ರವಾನೆ?:ಮತ್ತೊಬ್ಬ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು, ತಮ್ಮ ಫೋನ್ಗೆ ಸ್ವೀಕರಿಸಿದ ವಾಟ್ಸ್ಆ್ಯಪ್ ಸಂದೇಶವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಈ ಅನಪೇಕ್ಷಿತ ಸಂದೇಶವು ನನಗೆ ಬಂದಿದೆ. ಇದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಿಂದ ಬಂದಂತೆ ತೋರುತ್ತಿದೆ. ಇದು ಮಾದರಿ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.