ಪಾಟ್ನಾ:ಬಿಹಾರದಲ್ಲಿ ನಡೆಯುತ್ತಿರುವ ಭೂ ಸಮೀಕ್ಷೆಯಿಂದ ರಾಜ್ಯದಲ್ಲಿ ವ್ಯಾಜ್ಯಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಜನ ಸುರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಮಂಗಳವಾರ ಹೇಳಿದ್ದಾರೆ.
"ಸಮೀಕ್ಷೆಯು ನಡೆಯುತ್ತಿರುವ ವಿಧಾನದಿಂದಾಗಿ ಮುಂದಿನ ಆರು ತಿಂಗಳಲ್ಲಿ ವ್ಯಾಪಕ ಭೂ ಮಾಲೀಕತ್ವದ ವಿವಾದಗಳು ಭುಗಿಲೇಳಬಹುದು. ಸರಿಯಾದ ಸಿದ್ಧತೆ ಅಥವಾ ಸಂಪನ್ಮೂಲಗಳ ಬಳಕೆ ಮಾಡದೇ ತರಾತುರಿಯಲ್ಲಿ ಸಮೀಕ್ಷೆ ಪ್ರಾರಂಭಿಸಲಾಗಿದೆ" ಎಂದು ಕಿಶೋರ್ ಕೈಮೂರ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ತಿಳಿಸಿದರು.
"ನಿತೀಶ್ ಕುಮಾರ್ ಬಹುಶಃ ತಮ್ಮ ರಾಜಕೀಯ ಜೀವನದ ಕೊನೆಯ ಇನ್ನಿಂಗ್ಸ್ ಆಡುತ್ತಿದ್ದಾರೆ. ನಾನು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಹಾಗಂತ ಅವರು ತಪ್ಪು ಮಾಡಿರುವುದನ್ನು ಎತ್ತಿ ತೋರಿಸಲು ನಾನು ಹಿಂಜರಿಯಲಾರೆ. ಭೂ ಸಮೀಕ್ಷೆ ನಡೆಸಲು ಬಿಹಾರ ಸರ್ಕಾರ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಪ್ರಸ್ತುತ, ಬಿಹಾರದಲ್ಲಿ ಶೇಕಡಾ 33 ರಷ್ಟು ಭೂಮಿ ವಿವಾದದಲ್ಲಿದೆ ಮತ್ತು ಸಮೀಕ್ಷೆಯ ನಂತರ ಅದು ದ್ವಿಗುಣಗೊಳ್ಳಲಿದೆ" ಎಂದು ಅವರು ಹೇಳಿದರು.
ಬಿಹಾರದಲ್ಲಿ ನಡೆಯುತ್ತಿರುವ ಭೂ ಸಮೀಕ್ಷೆಯಿಂದ ಉದ್ಭವಿಸಬಹುದಾದ ಸಂಭಾವ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, "ಅನೇಕ ಪ್ಲಾಟ್ಗಳು ಕುಟುಂಬದ ಕೇವಲ ಓರ್ವ ಸದಸ್ಯನ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ. ಅಂಥ ವ್ಯಕ್ತಿಯು ಆಸ್ತಿಯನ್ನು ಇತರ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಲು ಇಷ್ಟಪಡದಿದ್ದರೆ ಅಥವಾ ಭೂ ಮಾಲೀಕತ್ವದಲ್ಲಿ ಯಾವುದೇ ಬದಲಾವಣೆಗಳಿಗೆ ಅಗತ್ಯವಾದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್ಒಸಿ) ಒದಗಿಸಲು ನಿರಾಕರಿಸಿದರೆ ಈ ಪರಿಸ್ಥಿತಿಯು ವಿವಾದಗಳಿಗೆ ಕಾರಣವಾಗಬಹುದು" ಎಂದು ಕಿಶೋರ್ ಹೇಳಿದರು.