ನಾಸಿಕ್, ಮಹಾರಾಷ್ಟ್ರ: ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲೂಕಿನ ದಾತಾಲಿ ಗ್ರಾಮದಲ್ಲಿ ಹಂದಿ ಜ್ವರದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಹಂದಿ ಜ್ವರದಿಂದಾಗಿ ಮತ್ತೊಬ್ಬ ರೋಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಹಂದಿ ಜ್ವರದಿಂದ ಇಬ್ಬರು ರೋಗಿಗಳಿಗೆ ಸೋಂಕು ತಗುಲಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಲ್ಲಿನ ಮುನ್ಸಿಪಲ್ ಕಾರ್ಪೊರೇಷನ್, ರೋಗದ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಆರೋಗ್ಯ ಇಲಾಖೆಗೆ ಸನ್ನದ್ಧವಾಗಿರುವಂತೆ ಸೂಚಿಸಿದೆ.
ಆರೋಗ್ಯ ಇಲಾಖೆಯೊಂದಿಗೆ ಕೂಡಿಕೊಂಡು ಮುನ್ಸಿಪಲ್ ಕಾರ್ಪೊರೇಷನ್ ಶಂಕಿತ ಹಂದಿ ಜ್ವರದ ರೋಗಿಗಳ ಪತ್ತೆಗೆ ಮುಂದಾಗಿದೆ. ನೆಗಡಿ, ಕೆಮ್ಮು ಮತ್ತು ಜ್ವರದ ಲಕ್ಷಣಗಳಿರುವವರು ಆಸ್ಪತ್ರೆಗಳಲ್ಲಿ ತಕ್ಷಣ ಚಿಕಿತ್ಸೆ ಪಡೆಯುವಂತೆ ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ.ತಾನಾಜಿ ಚವಾಣ್ ಜನರಲ್ಲಿ ಮನವಿ ಮಾಡಿದ್ದಾರೆ.
ಪ್ರಸ್ತುತ ನಾಸಿಕ್‌ನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇಂತಹ ವಾತಾವರಣದಲ್ಲಿ ಹಂದಿ ಜ್ವರದ ಸೋಂಕಿತರು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಇಬ್ಬರು ರೋಗಿಗಳಲ್ಲಿ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ. ಒಬ್ಬ ಮಹಿಳೆ ಮತ್ತು ಪುರುಷನಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಈ ಇಬ್ಬರ ಪರೀಕ್ಷಾ ವರದಿಗಳನ್ನು ಹೆಚ್ಚಿನ ತನಿಖೆಗಾಗಿ ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ. ಇಬ್ಬರ ವರದಿಯೂ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ದಿಢೀರ್ ಅಂತಾ ಎಚ್ಚೆತ್ತುಕೊಂಡಿದೆ. ಈ ರೋಗಿಗಳ ಸಂಪರ್ಕಗಳ ಸ್ವ್ಯಾಬ್‌ಗಳನ್ನು ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ತಾಲೂಕಿನ ಸಿನ್ನಾರ ತಾಲೂಕಿನ ದಟಳ್ಳಿಯ 63 ವರ್ಷದ ಮಹಿಳೆಯೊಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಮಹಿಳೆಯ ವರದಿ ಕೂಡ ಪಾಸಿಟಿವ್ ಬಂದಿದೆ ಎಂದು ಅಲ್ಲಿನ ಮೂಲಗಳು ಮಾಹಿತಿ ನೀಡಿವೆ.