ನವದೆಹಲಿ: ಸಂವಿಧಾನ (ನೂರ ಇಪ್ಪತ್ತೊಂಬತ್ತನೇ ತಿದ್ದುಪಡಿ) ಮಸೂದೆ 2024 ಎಂದು ಅಧಿಕೃತವಾಗಿ ಕರೆಯಲ್ಪಡುವ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯು ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಗಳಿಲ್ಲ ಎಂದು ತಿಳಿದು ಬಂದಿದೆ. ಲೋಕಸಭೆಯ ಸೋಮವಾರದ ಪರಿಷ್ಕೃತ ಕಲಾಪ ಪಟ್ಟಿಯಲ್ಲಿ ಮಸೂದೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವುದು ಈ ಸಂಶಯ ಮೂಡಲು ಕಾರಣ.
ಆರಂಭದಲ್ಲಿ ಸೋಮವಾರದ ಲೋಕಸಭೆ ಕಲಾಪ ಪಟ್ಟಿಯಲ್ಲಿ ಮಸೂದೆ ಮಂಡನೆಯನ್ನು ನಿಗದಿಪಡಿಸಲಾಗಿತ್ತು. "... ಅರ್ಜುನ್ ರಾಮ್ ಮೇಘವಾಲ್ ಅವರು ಭಾರತದ ಸಂವಿಧಾನವನ್ನು ಮತ್ತಷ್ಟು ತಿದ್ದುಪಡಿ ಮಾಡುವ ಮಸೂದೆ ಮಂಡಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ. ಜೊತೆಗೆ ಮಸೂದೆಯನ್ನು ಮಂಡಿಸಲಿದ್ದಾರೆ" ಎಂದು ಮೊದಲ ಕಲಾಪ ಪಟ್ಟಿಯಲ್ಲಿ ತಿಳಿಸಲಾಗಿತ್ತು.
ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯ್ದೆ, 1963, ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರ ಕಾಯ್ದೆ, 1991 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ, 2019 ಅನ್ನು ತಿದ್ದುಪಡಿ ಮಾಡಲು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2024 ಈ ಎಲ್ಲ ಮಸೂದೆಗಳನ್ನು ಕೂಡ ಅರ್ಜುನ್ ರಾಮ್ ಮೇಘವಾಲ್ ಸೋಮವಾರ ಮಂಡಿಸಬೇಕಿತ್ತು.
ಮೊದಲ ತಿದ್ದುಪಡಿ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಮತ್ತು ಮತ್ತೊಂದು ಮಸೂದೆ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿಯ ವಿಧಾನಸಭೆಗಳಿಗೆ ಚುನಾವಣೆಗಳ ದಿನಾಂಕಗಳನ್ನು ಹೊಂದಿಸುವ ಉದ್ದೇಶ ಹೊಂದಿತ್ತು.
ಡಿ.20ಕ್ಕೆ ಅಧಿವೇಶನ ಕೊನೆ: ಈಗ, ಪರಿಷ್ಕೃತ ಕಲಾಪ ಪಟ್ಟಿಯಲ್ಲಿ ಇದರಲ್ಲಿನ ಯಾವುದೇ ಮಸೂದೆಗಳನ್ನು ಉಲ್ಲೇಖಿಸದ ಕಾರಣ ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆಯು ಸೋಮವಾರ ಮಂಡನೆಯಾಗಲಾರದು ಎಂದು ಊಹಿಸಲಾಗಿದೆ. ವೇಳಾಪಟ್ಟಿಯ ಪ್ರಕಾರ ಪ್ರಸಕ್ತ ಅಧಿವೇಶನವು ಡಿಸೆಂಬರ್ 20ರಂದು ಕೊನೆಗೊಳ್ಳಲಿದೆ. ಹೀಗಾಗಿ ಈ ಮಸೂದೆಗಳನ್ನು ಈ ವಾರದ ಕೊನೆಯಲ್ಲಿ ಮಂಡಿಸಬಹುದು ಅಥವಾ ಸ್ಪೀಕರ್ ಅವರ ಅನುಮತಿಯೊಂದಿಗೆ 'ಕಲಾಪದ ಪೂರಕ ಪಟ್ಟಿ'ಯ ಮೂಲಕ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಈ ತಿದ್ದುಪಡಿ ಮಸೂದೆಗಳನ್ನು ಮಂಡಿಸಬಹುದು ಎಂದು ಮೂಲಗಳು ತಿಳಿಸಿವೆ.