ಚಂಡೀಗಢ: ಜನವರಿ 21ರಂದು ದಿಲ್ಲಿಗೆ 101 ರೈತರು ನಡೆಸಲು ಉದ್ದೇಶಿಸಿದ್ದ ಕಾಲ್ನಡಿಗೆ ಜಾಥಾವನ್ನು ಮುಂದೂಡಲಾಗಿದೆ ಎಂದು ಪ್ರತಿಭಟನಾನಿರತ ರೈತ ನಾಯಕ ಸರ್ವನ್ ಸಿಂಗ್ ಪಂಧೇರ್ ಸೋಮವಾರ ಪ್ರಕಟಿಸಿದ್ದಾರೆ. ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗಾಗಿ ಖಾತರಿ ಕಾನೂನು ರೂಪಿಸುವ ತಮ್ಮ ಬೇಡಿಕೆಗಳ ಕುರಿತು ಶೀಘ್ರವೇ ಮಾತುಕತೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಅವರು ಒತ್ತಾಯಿಸಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ನಡುವಿನ ಗಡಿಯಾದ ಶಂಭುದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾದ ಸಂಚಾಲಕ ಪಂಧೇರ್, ಇದು ಷರತ್ತು ಅಲ್ಲ ಆದರೆ ವಿನಂತಿ, ಆರಂಭದಲ್ಲಿ ಪ್ರಸ್ತಾಪಿಸಿದಂತೆ ಫೆಬ್ರವರಿ 14 ರೊಳಗೆ ಕೇಂದ್ರ ಸರ್ಕಾರ ದೆಹಲಿಯಲ್ಲಿ ಸಭೆ ಕರೆಯಲಿ ಎಂದು ಒತ್ತಾಯಿಸಿದರು.
"ಜನವರಿ 21 ರಂದು 101 ರೈತರು ದೆಹಲಿಗೆ ಜಾಥಾ ನಡೆಸಲಿದ್ದಾರೆ ಎಂದು ನಾವು ಈ ಹಿಂದೆ ಘೋಷಿಸಿದ್ದೆವು. ನಾವು ಈ ಬಗ್ಗೆ ಚರ್ಚಿಸಿದ್ದೇವೆ ಮತ್ತು ಸರ್ಕಾರಕ್ಕೆ ಹೆಚ್ಚಿನ ಸಮಯ ನೀಡಲು ಜನವರಿ 26 ರವರೆಗೆ ಜಾಥಾ ಮುಂದೂಡಲು ಎರಡೂ ವೇದಿಕೆಗಳು ನಿರ್ಧರಿಸಿವೆ. ನಾವು ಜನವರಿ 26 ರಂದು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಇದು ನಮ್ಮ ಷರತ್ತು ಅಲ್ಲ, ಆದರೆ ಇದು ರೈತರು ಮತ್ತು ಅವರ ಪ್ರತಿಭಟನೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ನವದೆಹಲಿಯಲ್ಲಿ ಆದಷ್ಟು ಬೇಗ ಸಭೆ ಕರೆಯುವಂತೆ ಸರ್ಕಾರಕ್ಕೆ ವಿನಂತಿ" ಎಂದು ಅವರು ಹೇಳಿದರು.
ಮಾತುಕತೆಗೆ ಕೇಂದ್ರದ ಪ್ರಸ್ತಾಪದ ಹೊರತಾಗಿಯೂ, ಉಪವಾಸ ನಿರತ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಎಂಎಸ್ಪಿ ಖಾತರಿ ಕಾನೂನು ಜಾರಿಗೆ ಬರುವವರೆಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಶನಿವಾರ ತಡರಾತ್ರಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆಯಾದರೂ ಅವರ ಆರೋಗ್ಯವು ಗಂಭೀರವಾಗಿದೆ. ನವೆಂಬರ್ 26 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ದಲ್ಲೆವಾಲ್ ಅವರ ಉಪವಾಸ ಸತ್ಯಾಗ್ರಹ 56 ದಿನಗಳನ್ನು ಪೂರೈಸಿದ್ದು, ಅವರ ಆರೋಗ್ಯದ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಜಂಟಿ ಕಾರ್ಯದರ್ಶಿ ಪ್ರಿಯಾ ರಂಜನ್ ನೇತೃತ್ವದ ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿಗಳ ನಿಯೋಗ ಶನಿವಾರ ಸಂಜೆ ದಲ್ಲೆವಾಲ್ ಅವರನ್ನು ಭೇಟಿಯಾಗಿ ಕಳೆದ 11 ತಿಂಗಳುಗಳಿಂದ ಆಂದೋಲನವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತು.
ಇದನ್ನೂ ಓದಿ : ಗೆಳತಿಯ ವರಿಸಲು ಹಿಂದು ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ - MUSLIM MAN CONVERTS TO HINDU