ಬೆಂಗಳೂರು : ಬೆಳಗಾವಿಯ ಹಿಡ್ಕಲ್ ಅಣೆಕಟ್ಟೆ ಹಿನ್ನೀರಿನಲ್ಲಿರುವ ಅಲ್ಲಮಪ್ರಭು ದೇವಾಲಯದ ಸ್ಥಳಾಂತರದ ಬಗ್ಗೆ ಅಲ್ಲಿನ ನಿವಾಸಿಗಳು ಹಾಗೂ ಭಕ್ತರ ಅಭಿಪ್ರಾಯ ಪಡೆದು ನಂತರ ಪರಿಶೀಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದೆ.
ಕಾನೂನು ವಿದ್ಯಾರ್ಥಿ ನಿಖಿಲ್ ಪಾಟೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ. ಐ. ಅರುಣ್ ಅವರಿದ್ದ ವಿಭಾಗೀಯ ಪೀಠ ಈ ಸಲಹೆ ನೀಡಿತು. ಅಲ್ಲದೆ, ದೇವಾಲಯ ಈಗಿರುವ ಜಾಗದಲ್ಲಿಯೇ ಇರಬೇಕೇ ಅಥವಾ ಸ್ಥಳಾಂತರ ಮಾಡಬೇಕೇ ಎಂಬ ಬಗ್ಗೆ ಸ್ಥಳೀಯ ಜನರು, ಭಕ್ತರ ಅಭಿಪ್ರಾಯಗಳನ್ನು ಅಧಿಕಾರಿಗಳು ಆಲಿಸಬೇಕು. ಯಾವುದೇ ನಿರ್ಧಾರ ಕೈಗೊಂಡರೂ ಅದು ಜನರ ಅಭಿಪ್ರಾಯದಂತಿರಬೇಕು ಎಂದು ತಿಳಿಸಿತು. ಅಲ್ಲದೆ, ಅರ್ಜಿದಾರರ ವಾದ ಆಲಿಸಿದ ಬಳಿಕ ನೀವು ದೇವಾಲಯವನ್ನು ಸ್ಥಳಾಂತರ ಮಾಡದಿದ್ದರೆ ಅದು ಶಿಥಿಲವಾಗುತ್ತದೆ. ಇಲ್ಲಿ ಪ್ರಶ್ನೆ ಇರುವುದು ಸಾರ್ವಜನಿಕರಿಗೆ ಸ್ಥಳಾಂತರ ಬೇಕೇ ಅಥವಾ ಬೇಡವೆ ಎಂಬುದು. ಹಾಗಾಗಿ ಅವರ ಅಭಿಪ್ರಾಯ ಆಲಿಸಿದ ನಂತರ ನಿರ್ಧಾರವನ್ನು ಕೈಗೊಳ್ಳಬಹುದು ಎಂದು ಪೀಠ ಹೇಳಿದೆ.
ಅರ್ಜಿದಾರರು, ಅಲ್ಲಮ ಪ್ರಭು ಸ್ವಾಮಿ ದೇವಾಲಯ ನೂರು ವರ್ಷಕ್ಕೂ ಮಿಗಿಲಾದ ಇತಿಹಾಸವನ್ನು ಹೊಂದಿರುವುದರಿಂದ ಅದನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಬೇಕು. ಆರು ತಿಂಗಳ ಕಾಲ ದೇವಾಲಯ ಹಿನ್ನೀರಿನಲ್ಲಿ ಮುಳುಗಡೆ ಆಗುವುದರಿಂದ ಅದನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಕೋರಿದ್ದಾರೆ. ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಕಾನೂನು ಪ್ರಕಾರ ರಾಜ್ಯ ಸರ್ಕಾರವೇ ಪ್ರಾಚೀನ ಸ್ಮಾರಕವೆಂದು ಸಂರಕ್ಷಣೆ ಮಾಡಬೇಕಿದ್ದು, ಸರ್ಕಾರವೇ ಈ ಕುರಿತು ತೀರ್ಮಾನಿಸಬೇಕು. ಅಣೆಕಟ್ಟೆ ನಿರ್ಮಾಣದ ವೇಳೆಯೇ ಜನರನ್ನು ಸ್ಥಳಾಂತರ ಮಾಡಿದಂತೆ ದೇವಾಲಯವನ್ನು ಸ್ಥಳಾಂತರ ಮಾಡಬೇಕಿತ್ತು ಎಂದು ವಿವರಿಸಿದರು.
ಕಳೆದ 2024ರ ನವೆಂಬರ್ 11ರಂದು ನಡೆದಿದ್ದ ವಿಚಾರಣೆ ವೇಳೆ ನ್ಯಾಯಾಲಯ ರಾಜ್ಯ ಸರ್ಕಾರದ ಮೂವರು ಸದಸ್ಯರ ಸಮಿತಿಯನ್ನು ರಚನೆ ಮಾಡಬೇಕು, ಆ ಸಮಿತಿ ಅಲ್ಲಮಪ್ರಭು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಆದೇಶ ನೀಡಿತ್ತು. ಸಮಿತಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್, ಸಮಿತಿ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಏಕೆಂದರೆ ದೇವಾಲಯ ಸದ್ಯ ಅಣೆಕಟ್ಟೆಯ ಹಿನ್ನೀರಿನಲ್ಲಿ ಜಲಾವೃತಗೊಂಡಿದೆ. ಹಾಗಾಗಿ ಸಮಿತಿ ನೀರು ಖಾಲಿಯಾದ ಬಳಿಕ ಭೇಟಿ ನೀಡುವುದಾಗಿ ತಿಳಿಸಿದೆ ಎಂದು ಹೇಳಿದೆ.
ಇದನ್ನೂ ಓದಿ; ವೀರೇಂದ್ರ ಹೆಗ್ಗಡೆ, ಕುಟುಂಬದ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿಗೆ ಹೈಕೋರ್ಟ್ ನಿರ್ದೇಶನ