ಚೆನ್ನೈ (ತಮಿಳುನಾಡು):ಕೇಂದ್ರದ ಎನ್ಡಿಎ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಯು ಅಪಾಯಕಾರಿ, ದೋಷಪೂರಿತವಾಗಿದೆ. ಭಾರತಕ್ಕೆ ಇದರ ಅಗತ್ಯವಿಲ್ಲ ಮತ್ತು ಭವಿಷ್ಯದಲ್ಲಿಯೂ ಪ್ರಯೋಜನಕ್ಕೆ ಬಾರದು ಎಂದು ಖ್ಯಾತ ನಟ ಮತ್ತು ಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದರು.
2014 ರಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದಿದ್ದರೆ ಸರ್ವಾಧಿಕಾರ, ವಾಕ್ ಸ್ವಾತಂತ್ರ್ಯದ ಹರಣ ಮತ್ತು ಒಬ್ಬನೇ ನಾಯಕನ ಪ್ರಾಬಲ್ಯಕ್ಕೆ ಕಾರಣವಾಗುತ್ತಿತ್ತು ಎಂದು ಪರೋಕ್ಷವಾಗಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು.
ನಾವು ಕೊರೊನಾ ವೈರಸ್ಗಿಂತ ಹೆಚ್ಚು ತೀವ್ರವಾದ ಕಾಯಿಲೆಯಿಂದ ಪಾರಾಗಿದ್ದೇವೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿಯ ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆಯನ್ನು ಮಾರಕ ವೈರಸ್ಗೆ ಹೋಲಿಸಿದರು.
ಈ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಚುನಾವಣೆ:ಯುರೋಪ್ ಮತ್ತು ರಷ್ಯಾದಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತವೆ. ಅಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ ಎಂದು ಕಮಲ್ ಹಾಸನ್ ಹೇಳಿದರು. ಆದರೆ, ಈ ವ್ಯವಸ್ಥೆ ವಿಫಲವಾದ ಯಾವುದೇ ಒಂದು ದೇಶದ ಬಗ್ಗೆ ನಿರ್ದಿಷ್ಟವಾಗಿ ತಿಳಿಸಲಿಲ್ಲ. ಟ್ರಾಫಿಕ್ ಸಿಗ್ನಲ್ ದೀಪಗಳನ್ನು ಉದಾಹರಿಸಿದ ನಟ, ಒಂದೇ ಬಣ್ಣದ ದೀಪವು ಒಂದೇ ಸಮಯದಲ್ಲಿ ಹೊತ್ತಿಕೊಂಡಿದ್ದರೆ ಏನಾಗುತ್ತದೆ ಎಂದು ಯೋಚಿಸಿ. ನಮಗೆ ಆಯ್ಕೆ ಇರಬೇಕು. ಇಲ್ಲವಾದಲ್ಲಿ ವಾಕ್ ಸ್ವಾತಂತ್ರ್ಯ, ಸರ್ವಾಧಿಕಾರ ಬೆಳೆಯುತ್ತದೆ ಎಂದರು.