ಕೋಲ್ಕತ್ತಾ(ಪಶ್ಚಿಮ ಬಂಗಾಳ):ವಿವಿಧ ವಿಭಾಗಗಳಲ್ಲಿ ಸೇವೆಗೆ ನಿಯೋಜಿತರಾಗಿರುವ ಯೋಧರು ತಮ್ಮ ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಈಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕೌಟುಂಬಿಕ ಕಾರಣ, ಕೆಲಸದ ಒತ್ತಡ ಸೇರಿದಂತೆ ಹಲವು ಕಾರಣಕ್ಕಾಗಿ ಈ ರೀತಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭದ್ರತೆಗಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಯೋಧರೊಬ್ಬರು ಕರ್ತವ್ಯದ ವೇಳೆಯೇ ತಮ್ಮಲ್ಲಿದ್ದ ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣದ ಯುವ ಯೋಧ ಸಿ.ವಿಷ್ಣು (22) ಮೃತರು. ವಿಮಾನ ನಿಲ್ದಾಣದ ಗೇಟ್ 5ರಲ್ಲಿ ಭದ್ರತೆಗಿದ್ದ ವೇಳೆ ಬೆಳಗ್ಗೆ 5.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಲೆಟ್ ಸದ್ದು ಕೇಳಿ ಬಂದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಯೋಧ ವಿಷ್ಣು ನೆಲಕ್ಕುರುಳಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.