ಕಾಶ್ಮೀರ:ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫ್ರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು, ಸರ್ಕಾರ ರಚನೆಗೆ ಸಜ್ಜಾಗಿದೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನ್ಯಾಷನಲ್ ಕಾನ್ಫ್ರೆನ್ಸ್ ಇಂದು (ಗುರುವಾರ) ತನ್ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಒಮರ್ ಅಬ್ದುಲ್ಲಾ ಅವರನ್ನು ಆಯ್ಕೆ ಮಾಡಿದೆ.
ಶ್ರೀನಗರದಲ್ಲಿ ಗುರುವಾರ ನಡೆದ ಪಕ್ಷದ ಸಭೆಯಲ್ಲಿ ಒಮರ್ ಅವರನ್ನು ಶಾಸಕಾಂಗದ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಮಾಹಿತಿಯನ್ನು ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಿಎಂ ಆಗಿ ಯಾವಾಗ ಪ್ರಮಾಣ?:ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೂ ಮೊದಲೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಎನ್ಸಿ, ಸಿಎಂ ಆಯ್ಕೆ ವಿಚಾರದಲ್ಲಿ ಔಪಚಾರಿಕವಾಗಿ ಮಾತುಕತೆ ನಡೆಸಲಿದೆ. ಇದಕ್ಕಾಗಿ ಶುಕ್ರವಾರ (ಅಕ್ಟೋಬರ್ 11) ಸಭೆ ಕರೆದಿದೆ. ಇಲ್ಲಿ ನೂತನ ಸಿಎಂ ಹೆಸರನ್ನು ಅಖೈರು ಮಾಡುವ ಸಾಧ್ಯತೆ ಇದೆ.
ಈಗಾಗಲೇ ಫಾರೂಕ್ ಅಬ್ದುಲ್ಲಾ ಅವರು ಸಿಎಂ ಆಗಿ ಒಮರ್ ಅಬ್ದುಲ್ಲಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಚುನಾವಣೆ ಫಲಿತಾಂಶ ಪ್ರಕಟವಾದ ದಿನವೇ ಘೋಷಿಸಿದ್ದರು. ಮೇಲಾಗಿ ಚುನಾವಣೆಯಲ್ಲೂ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿರುವ ಕಾರಣ ಸಿಎಂ ಆಯ್ಕೆ ವಿಷಯ ಎನ್ಸಿ ಪಕ್ಷವೇ ನಿರ್ಧರಿಸಲಿದೆ.
ಮೂಲಗಳ ಮಾಹಿತಿ ಪ್ರಕಾರ, ಒಮರ್ ಅಬ್ದುಲ್ಲಾ ಅವರು ಭಾನುವಾರ ಅಥವಾ ಸೋಮವಾರ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸರಳ ಬಹುಮತದತ್ತ ಎನ್ಸಿ:ನ್ಯಾಷನಲ್ ಕಾನ್ಫರೆನ್ಸ್- ಕಾಂಗ್ರೆಸ್ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದರೂ, ಎನ್ಸಿ ನಿಚ್ಚಳ ಬಹುಮತ ಪಡೆದಿದೆ. 42 ಸ್ಥಾನಗಳಲ್ಲಿ ಪಕ್ಷವು ಗೆಲುವು ಸಾಧಿಸಿದ್ದು, ನಾಲ್ವರು ಪಕ್ಷೇತರರು ಎನ್ಸಿ ಸೇರಲು ಮುಂದಾಗಿದ್ದಾರೆ. ಹೀಗಾಗಿ ಕಣಿವೆ ನಾಡಿನ ಪಕ್ಷವು ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 46 ಅನ್ನು ಪಡೆಯಲಿದೆ. ಇತ್ತ ಮಿತ್ರಪಕ್ಷ ಕಾಂಗ್ರೆಸ್ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸರ್ಕಾರದ ಭಾಗವಾಗಿರಲಿದೆ.
ಇದನ್ನೂ ಓದಿ:ಐವರು ಶಾಸಕರನ್ನು ನಾಮನಿರ್ದೇಶನ ಮಾಡಿದರೆ ಸುಪ್ರೀಂ ಕೋರ್ಟ್ ಮೊರೆ: ಫಾರೂಕ್ ಅಬ್ದುಲ್ಲಾ