ಮಲ್ಕಾನ್‌ಗಿರಿ (ಒಡಿಶಾ):ಬಹುಮಾನ ಹೊತ್ತಮೂವರು ಮಹಿಳಾ ಹೈ-ಪ್ರೊಫೈಲ್ಮಾವೋವಾದಿಗಳನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಸ್ವಪ್ನಾ ಅಲಿಯಾಸ್ ಚಂದ್ರಮ ಖಿಲೋ, ಬಬಿತಾ ಅಲಿಯಾಸ್ ಕಮಲಾ ಖಿಲೋ ಮತ್ತು ಸುನೀತಾ ಖಿಲೋ ಬಂಧಿತ ಮಹಿಳಾ ಮಾವೋವಾದಿಗಳು.
ಬಂಧಿತರ ತಲೆಗೆ ಒಟ್ಟು 8 ಲಕ್ಷ ರೂ. ಘೋಷಣೆ ಮಾಡಲಾಗಿತ್ತು. ಶನಿವಾರ ಮಲ್ಕಾನ್‌ಗಿರಿ ಜಿಲ್ಲೆ ಚಿತ್ರಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಗುಮ್ಮಾ ಎಂಬ ಪ್ರದೇಶದಲ್ಲಿ ಈ ಮೂವರು ಮಹಿಳಾ ಮಾವೋವಾದಿಗಳನ್ನು ಬಂಧಿಸಿರುವ ಒಡಿಶಾ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಮೂವರು ಜಿಲ್ಲೆಯ ಜೋಡಂಬೋ ಪೊಲೀಸ್ ಠಾಣೆ ವ್ಯಾಪ್ತಿಯ ಢಕಡಪದರ್ ಗ್ರಾಮದವರಾಗಿದ್ದು, ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಆಂಧ್ರ-ಒಡಿಶಾ ಗಡಿ ವಿಶೇಷ ವಲಯ ಸಮಿತಿಯಲ್ಲಿ ಕಾಣಿಸಿಕೊಂಡಿರುವುದಾಗಿ ನೈಋತ್ಯ ವಲಯದ ಡಿಐಜಿ ನಿತಿ ಶೇಖರ್ ಮತ್ತು ಮಲ್ಕಾನ್‌ಗಿರಿ ಪೊಲೀಸ್ ವರಿಷ್ಠಾಧಿಕಾರಿ ಬಿಬೇಕಾನಂದ ಶರ್ಮಾ ತಿಳಿಸಿದ್ದಾರೆ.
ಜಂಟಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೂವರು ಭದ್ರತಾ ಪಡೆಗಳೊಂದಿಗೆ ಹಲವು ಬಾರಿ ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿದ್ದು, ಸಿಪಿಐ (ಮಾವೋವಾದಿ) ಸಂಘಟನೆಯ ಆಂಧ್ರ ಒಡಿಶಾ ಗಡಿ ವಿಶೇಷ ವಲಯ ಸಮಿತಿಯ ಭಾಗವಾಗಿದ್ದರು. ವಿಚಾರಣೆ ವೇಳೆ ಅವರು ಭದ್ರತಾ ಪಡೆಗಳ ಮೇಲೆ ಇನ್ನಷ್ಟು ದಾಳಿ ನಡೆಸಲು ಯೋಜನೆ ರೂಪಿಸಿದ್ದಂದು ತಿಳಿದುಬಂದಿದೆ. ಚಂದ್ರಮಾ ಖಿಲೋ ಅವರು 2018ರಲ್ಲಿ ನಿಷೇಧಿತ ಸಂಘಟನೆಗೆ ಸೇರಿದ ಪ್ರದೇಶ ಸಮಿತಿ ಸದಸ್ಯರಾಗಿದ್ದರು. ಒಡಿಶಾದಲ್ಲಿ ಆಕೆಯನ್ನು ಹುಡುಕಿ ತಂದವರಿಗೆ 4 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಕಮಲಾ ಖಿಲೋ ಮತ್ತು ಸುನೀತಾ ಖಿಲೋ 2021ರಲ್ಲಿ ಮಾವೋವಾದಿಗಳನ್ನು ಸೇರಿಕೊಂಡಿದ್ದು AOBSZC ಯ 'ಉದಯ್ ಪ್ರೊಟೆಕ್ಷನ್ ಟೀಮ್' ಸದಸ್ಯರಾಗಿದ್ದರು. ಒಡಿಶಾದಲ್ಲಿ ಅವರ ತಲೆಗೆ ತಲಾ 2 ಲಕ್ಷ ರೂ. ಘೋಷಣೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿ, ಇಲ್ಲವೇ ಭದ್ರತಾ ಸಿಬ್ಬಂದಿಯ ಕಠಿಣ ಕ್ರಮ ಎದುರಿಸಿ: ಅಮಿತ್ ಶಾ - NAXAL FREE COUNTRY