ಮಧುರೈ (ತಮಿಳುನಾಡು): ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರಕ್ಕೆ ಪ್ರತಿ ವರ್ಷ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅದರಂತೆ ಈ ವರ್ಷ ಕಾವ್ಯ ರಚನೆ, ಕಥೆ, ಕಾದಂಬರಿಗಳ ಬರಹದಲ್ಲಿ ಸದಾ ಚಟುವಟಿಕೆಯಿಂದ ಇರುವ 53 ವರ್ಷದ ಲೇಖಕಿ ಹ್ಯಾನ್ ಕಾಂಗ್ ಅವರಿಗೆ 2024ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ''ಐತಿಹಾಸಿಕ ಆಘಾತಗಳು ಮತ್ತು ಮಾನವ ಜೀವನದ ದುರ್ಬಲತೆಯನ್ನು ಬಹಿರಂಗಪಡಿಸುವ ಅವರ ಕಾವ್ಯಾತ್ಮಕ ಗದ್ಯಕ್ಕೆ'' ಈ ಪ್ರಶಸ್ತಿ ನೀಡಲಾಗಿದ್ದು, ಸಾಹಿತ್ಯದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊಟ್ಟ ಮೊದಲ ಮಹಿಳೆ ಇವರಾಗಿದ್ದಾರೆ.
ಹ್ಯಾನ್ ಕಾಂಗ್ ಅವರು 2016ರಲ್ಲಿ ''ದಿ ವೆಜಿಟೇರಿಯನ್'' ಎಂಬ ತಮ್ಮ ಕಾದಂಬರಿಗಾಗಿ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಆ ಪ್ರಶಸ್ತಿಯನ್ನು ಗೆದ್ದ ಮೊದಲ ಕೊರಿಯನ್ ಎಂಬ ಹೆಗ್ಗಳಿಕೆ ಕೂಡ ಅವರದ್ದಾಗಿದೆ. ಓರ್ವ ಮಹಿಳೆ ಮಾಂಸ ತಿನ್ನುವುದನ್ನು ನಿಲ್ಲಿಸಲು ನಿರ್ಧರಿಸಿದ ಬಳಿಕ ಏನೆಲ್ಲ ಪರಿಣಾಮಗಳನ್ನು ಎದುರಿಸಬೇಕಾಯಿತು ಅನ್ನೋದನ್ನು ಈ ಕೃತಿ ಒಳಗೊಂಡಿದೆ. ಅವರ ಇನ್ನೊಂದು ಕಾದಂಬರಿ 'ಹ್ಯೂಮನ್ ಆಕ್ಟ್ಸ್' 2018 ರಲ್ಲಿ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತನ್ನು ತಲುಪಿದೆ.
ನಿಯತಕಾಲಿಕದಲ್ಲಿ ಹ್ಯಾನ್ ಕಾಂಗ್ ಅವರ ಹಲವು ಕವಿತೆಗಳು ಪ್ರಕಟವಾಗಿವೆ. ಅವರೇ ಬರೆದ ''ದಿ ವೆಜಿಟೇರಿಯನ್'' ಕಾದಂಬರಿಯನ್ನು ತಮಿಳು ಕವಿ ಸಮಯವೇಲ್ ಅವರು ''ಮರಕರಿ'' ಎಂಬ ಹೆಸರಿನಲ್ಲಿ ತಮಿಳಿಗೆ ಅನುವಾದಿಸಿದ್ದಾರೆ. ಈಟಿವಿ ಭಾರತ ಕವಿ ಸಮಯವೇಲ್ ಅವರ ಸಂದರ್ಶನ ನಡೆಸಿದ್ದು, ವಿಶೇಷ ಸಂದರ್ಶನದ ಮಾಹಿತಿ ಇಲ್ಲಿದೆ.
ಹ್ಯಾನ್ ಕಾಂಗ್ ಹಿನ್ನೆಲೆ:2024ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಹ್ಯಾನ್ ಕಾಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಇದೀಗ ಸೆಳೆದಿದ್ದಾರೆ. 1970ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್ಜುದಲ್ಲಿ ಜನಿಸಿದ ಹ್ಯಾನ್ ಕಾಂಗ್, ಆ ದೇಶದ ಸಾಹಿತ್ಯ ಲೋಕದಲ್ಲಿ ತನ್ನನ್ನು ತಾನು ಮೊದಲು ಕವಿಯಾಗಿ ಗುರುತಿಸಿಕೊಂಡವರು. 'ದಿ ವೆಜಿಟೇರಿಯನ್' ಎಂಬ ಮೂರು ಭಾಗಗಳ ಕಾದಂಬರಿಯನ್ನು ರಚಿಸುವ ಮೂಲಕ ಸಾಹಿತ್ಯದಲ್ಲಿ ಹೊಸ ಕ್ರಾಂತಿ ಹುಟ್ಟು ಹಾಕಿದ ಶ್ರೇಯಸ್ಸು ಅವರದ್ದಾಗಿದೆ. ಇದಕ್ಕೆ ಅವರು 2016ರಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿ ಕೂಡ ಗೆದ್ದರು. ಆ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗುರುತಿಸಿಕೊಂಡರು.
ಸಮಯವೇಲ್ ಅವರ ಸಂದರ್ಶನ: ನನ್ನ ಯೌವನದಿಂದಲೂ ನಾನು ಎಲ್ಲಾ ದೇಶದ ಸಾಹಿತ್ಯವನ್ನು ಓದುತ್ತಿದ್ದೆ. ಹಾಗಾಗಿಯೇ ನನಗೆ ದಕ್ಷಿಣ ಕೊರಿಯಾದ ಸಾಹಿತ್ಯದ ಪರಿಚಯವಾಯಿತು. ನನಗೆ ಕೊರಿಯಾದ ಬಗ್ಗೆ ವಿಶೇಷವಾದ ಆಕರ್ಷಣೆ ಇದೆ. ಏಕೆಂದರೆ ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯಿಂದ ಬೌದ್ಧ ಧರ್ಮ ಚೀನಾ, ಜಪಾನ್, ಕೊರಿಯಾ, ಶ್ರೀಲಂಕಾ ಮುಂತಾದ ದೇಶಗಳಿಗೆ ಹರಡಿತು. ಆಗ ಇಲ್ಲಿಂದ ಪುಸ್ತಕಗಳನ್ನು ಸಾಗಿಸುವುದು ತುಂಬಾ ಅಪಾಯಕಾರಿಯಾಗಿತ್ತು. ಆದ್ದರಿಂದ, 18 ಬೌದ್ಧ ಸನ್ಯಾಸಿಗಳ ಗುಂಪು ಅದನ್ನು ಓದಿ, ಕಂಠಪಾಠ ಮಾಡಿ ಮತ್ತು ಅಲ್ಲಿನ ವಿಚಾರಗಳನ್ನು ತೆಗೆದುಕೊಂಡಿತು ಎಂದು ಸಮಯವೇಲ್ ತಮ್ಮ ಸಾಹಿತ್ಯಾಸಕ್ತಿ ಬಗ್ಗೆ ಮಾಹಿತಿ ನೀಡಿದರು.
ಸಾವಿನ ಬಗ್ಗೆ ಮಹತ್ತರ ಅಧ್ಯಯನ:ಹ್ಯಾನ್ ಹಾಂಗ್ ಅವರ ‘ದಿ ವೆಜಿಟೇರಿಯನ್’ ಕಾದಂಬರಿ ಕೂಡ ಇಂತಹದ್ದೇ ಸೈದ್ಧಾಂತಿಕ ಹಿನ್ನೆಲೆಯನ್ನು ಹೊತ್ತು ಬಂದಿದೆ. ಅದಕ್ಕಾಗಿಯೇ ಆ ಕಾದಂಬರಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಲೇಖಕಿ ಹಾನ್ ಹಾಂಗ್ ಅವರು ತಮ್ಮ ಮನಸ್ಸಿನಲ್ಲಿರುವ ಮೂಲಭೂತ ಪ್ರಶ್ನೆಗಳ ಹಿನ್ನೆಲೆಯಿಂದ ಈ ಕಾದಂಬರಿಯನ್ನು ರಚಿಸಿದ್ದಾರೆ. ಹಾಗಾಗಿ ಅದು ಎಲ್ಲರಿಗೂ ತಟ್ಟುತ್ತದೆ. ಹಾನ್ ಹಾಂಗ್ ಅವರು ಮಾನವರನ್ನು ಈ ಭೂಮಿಯ ಮೇಲಿನ ಎಲ್ಲಾ ಜೀವ ರಾಶಿಗಳೊಂದಿಗೆ ಹೋಲಿಸುತ್ತಾರೆ. ನಾವು ಏಕೆ ಹುಟ್ಟಿದ್ದೇವೆ? ನಾವು ಏಕೆ ಬದುಕುತ್ತೇವೆ? ನಾವೇಕೆ ಸಾಯುತ್ತೇವೆ? ಇದಲ್ಲದೆ, ಈ ಕಾದಂಬರಿಯು ಸಾವಿನ ಬಗ್ಗೆ ಒಂದು ಉತ್ತಮ ಅಧ್ಯಯನವಾಗಿದೆ. ಮನುಷ್ಯನು ಹುಟ್ಟಿನಿಂದ ಸಾಯುವವರೆಗೆ ಹೋರಾಟಗಳನ್ನು ಏಕೆ ಎದುರಿಸಬೇಕಾಗುತ್ತದೆ? ಎಂಬ ಪ್ರಶ್ನೆಯನ್ನು ಆಧರಿಸಿ ಅವರು ಈ ಕಾದಂಬರಿಯನ್ನು ರಚಿಸಿದ್ದಾರೆ ಎನ್ನುತ್ತಾರೆ ಕವಿ ಸಮಯವೇಲ್.