ನವದೆಹಲಿ:ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಹಾಸನ ಸಂಸದರ ವಿರುದ್ಧ ಯಾವುದೇ ಸಂತ್ರಸ್ತ ಮಹಿಳೆಯರು ಆಯೋಗಕ್ಕೆ ದೂರು ನೀಡಿಲ್ಲ. ಒಬ್ಬ ಮಹಿಳೆ ತನ್ನ ಮೇಲೆ ಒತ್ತಡ ಹಾಕಿ ಕೇಸ್ ದಾಖಲಿಸುವಂತೆ ಮಾಡಿದ್ದಾಗಿ ಆರೋಪಿಸಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಗುರುವಾರ ತಿಳಿಸಿದೆ.
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ದಳ (ಎಸ್ಐಟಿ) ರಚನೆ ಮಾಡಿ ತನಿಖೆಗೆ ಆದೇಶಿಸಿದೆ. ಈ ಮಧ್ಯೆ ಮಹಿಳಾ ಆಯೋಗವು ಯಾವುದೇ ಸಂತ್ರಸ್ತರು ಆಯೋಗಕ್ಕೆ ಬಂದು ದೂರು ದಾಖಲಿಸಿಲ್ಲ ಎಂದು ತಿಳಿಸಿರುವುದು ಭಾರಿ ಮಹತ್ವ ಪಡೆದುಕೊಂಡಿದೆ.
ಸಂಸದರ ವಿರುದ್ಧದ ತನಿಖೆಯಲ್ಲಿ ಮಹಿಳಾ ಪೊಲೀಸರ ಇರುವಿಕೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಆಯೋಗ, ಪ್ರಕರಣದ ಸೂಕ್ಷ್ಮತೆ ಮತ್ತು ಕಾಳಜಿ ಬಗ್ಗೆ ಧ್ವನಿ ಎತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡ ವರದಿಯ ಮಹತ್ವದ ವಿಚಾರಗಳನ್ನೂ ರಾಷ್ಟ್ರೀಯ ಮಹಿಳಾ ಆಯೋಗ ಹಂಚಿಕೊಂಡಿದೆ.
ಎನ್‌ಸಿಡಬ್ಲ್ಯೂ ಪ್ರಕಾರ, ಲೈಂಗಿಕ ದೌರ್ಜನ್ಯದ ದೂರುಗಳ ಆಧಾರದ ಮೇಲೆ ಎರಡು ಪ್ರಕರಣಗಳು ದಾಖಲಾಗಿವೆ. ಇನ್ನೊಂದು ಅಪಹರಣ ಕೇಸ್ ಕೂಡ ದಾಖಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಸಂತ್ರಸ್ತರು ಆಯೋಗಕ್ಕೆ ದೂರು ದಾಖಲಿಸಲು ಮುಂದೆ ಬಂದಿಲ್ಲ ಎಂದು ಅದು ಹೇಳಿದೆ.