ಕರ್ನಾಟಕ

karnataka

ETV Bharat / bharat

'ಮೋದಿ ಕೀ ಗ್ಯಾರಂಟಿ-ಜುಮ್ಲಾಗಳ ವಾರಂಟಿ': ಬಿಜೆಪಿಯ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್​ ವ್ಯಂಗ್ಯ - Congress on BJP manifesto

ಮೋದಿ ಕೀ ಗ್ಯಾರಂಟಿ ಎಂದರೆ ಜುಮ್ಲಾಗಳ ವಾರಂಟಿ. ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ.

No accountability for old guarantees, just empty jugglery of words: Congress on BJP manifesto
'ಮೋದಿ ಕೀ ಗ್ಯಾರಂಟಿ-ಜುಮ್ಲಾಗಳ ವಾರಂಟಿ': ಬಿಜೆಪಿಯ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್​ ವ್ಯಂಗ್ಯ

By PTI

Published : Apr 14, 2024, 4:31 PM IST

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಪ್ರಕಟಿಸಿರುವ ಪ್ರಣಾಳಿಕೆಯ ಬಗ್ಗೆ ಕಾಂಗ್ರೆಸ್​ ವ್ಯಂಗ್ಯವಾಡಿದೆ. ಬಿಜೆಪಿಯ ಹಳೆ ಆಶ್ವಾಸನೆಗಳಿಗೆ ಹೊಣೆಗಾರಿಕೆ ಇಲ್ಲ. ಇದು ಬರೀ ಖಾಲಿ ಪದಗಳ ಕಣ್ಕಟ್ಟು. ಮೋದಿ ಕೀ ಗ್ಯಾರಂಟಿ ಎಂದರೆ, ಜುಮ್ಲಾಗಳ ವಾರಂಟಿ ಎಂದು ವ್ಯಂಗ್ಯವಾಡಿರುವ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿ ವಿಫಲರಾಗಿದ್ದಾರೆ ಎಂದೂ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ದೇಶದ ಜನತೆ, ಯುವಕರು ಮತ್ತು ರೈತರಿಗೆ ಅನುಕೂಲವಾಗುವಂತಹ ಯಾವುದೇ ಮಹತ್ವದ ಕೆಲಸ ಮಾಡಿಲ್ಲ. ಉದ್ಯೋಗಕ್ಕಾಗಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಣದುಬ್ಬರದಿಂದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಇದರಿಂದ ಜನರು ತೊಂದರೆಗೀಡಾಗಿದ್ದಾರೆ. ಆದರೆ, ತಮ್ಮ ಪ್ರಣಾಳಿಕೆಯಲ್ಲಿ ಅದರ ಬಗ್ಗೆ ಏನೂ ಹೇಳಿಲ್ಲ ಎಂದು ರಾಜ್ಯಸಭೆ ವಿಪಕ್ಷ ನಾಯಕರೂ ಆದ ಖರ್ಗೆ ಕಿಡಿಕಾರಿದ್ದಾರೆ.

ಅಲ್ಲದೇ, "ಹಳೆಯ ಗ್ಯಾರಂಟಿಗಳಿಗೆ ಹೊಣೆಗಾರಿಕೆ ಇಲ್ಲ. ಕೇವಲ ಪದಗಳ ಖಾಲಿ ಕಣ್ಕಟ್ಟು!. ಮೋದಿ ಕಿ ಗ್ಯಾರಂಟಿ' ಎಂದರೆ ಜುಮ್ಲಾಗಳ ವಾರಂಟಿ'' ಎಂದು ಖರ್ಗೆ ಸಾಮಾಜಿಕ ಜಾಲತಾಣದ 'ಎಕ್ಸ್​'ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದೇ ವೇಳೆ, ಈ ಹಿಂದೆ ಬಿಜೆಪಿ ಮತ್ತು ಮೋದಿ ನೀಡಿದ್ದ ಹಳೆ ಆಶ್ವಾಸನೆಗಳ ಪಟ್ಟಿ ಮಾಡಿದ್ದಾರೆ.

ಯುವಕರಿಗೆ ವಾರ್ಷಿಕವಾಗಿ 2 ಕೋಟಿ ಉದ್ಯೋಗಗಳನ್ನು ಒದಗಿಸುವುದು ಏನಾಯಿತು?. ರೈತರ ಆದಾಯವನ್ನು ದ್ವಿಗುಣಗೊಳಿಸಲು ಏನಾಯಿತು?. 2022ರ ವೇಳೆಗೆ ಪ್ರತಿಯೊಂದು ಕುಟುಂಬಕ್ಕೂ ಸೂರು ಒದಗಿಸುವುದು ಏನಾಯಿತು?. 2022ರ ವೇಳೆಗೆ ಎಲ್ಲರಿಗೂ 24x7 ವಿದ್ಯುತ್ ನೀಡುವುದು ಏನಾಯಿತು?. 2022ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವುದು ಏನಾಯಿತು?. 100 ಹೊಸ ಸ್ಮಾರ್ಟ್ ಸಿಟಿಗಳು ಏನಾದವು?. 2020ರ ವರೆಗೆ ಗಂಗಾ ಶುದ್ಧೀಕರಣ ಏನಾಯಿತು? ಎಂದು ಒಟ್ಟಾರೆ 14 ಪ್ರಶ್ನೆಗಳನ್ನೂ ಖರ್ಗೆ ಮುಂದಿಟ್ಟಿದ್ದಾರೆ.

ಮತ್ತೊಂದೆಡೆ, ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, 2014ರ ಪ್ರಣಾಳಿಕೆಯಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸುವ ಮೂಲಕ ಕಪ್ಪು ಹಣವನ್ನು ವಾಪಸ್ ತರುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ, ಅದರ ಬದಲಿಗೆ ಚುನಾವಣಾ ಬಾಂಡ್‌ಗಳನ್ನು ತರಲಾಯಿತು. ಈಶಾನ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇಂದು ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ. ಅದರ ಬಗ್ಗೆ ಮೋದಿ ಮೌನ ವಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಶೇಷ ಪ್ಯಾಕೇಜ್ ಮೂಲಕ 100 ಜಿಲ್ಲೆಗಳಲ್ಲಿ ಬಡತನ ನಿರ್ಮೂಲನೆ ಮಾಡಲಾಗುವುದು ಎಂದು ಮೋದಿ ಭರವಸೆ ಕೊಟ್ಟಿದ್ದರು. ಆದರೆ, ಹಸಿವು ಸೂಚ್ಯಂಕದ ಅಂಕಿ-ಅಂಶಗಳೇ ಇಂದಿನ ನೈಜತೆಯನ್ನಯ ಬಹಿರಂಗಪಡಿಸಿವೆ. ಬಿಜೆಪಿ 100 ಹೊಸ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿತ್ತು. ಆದರೆ, ಅವುಗಳನ್ನು ಎಂದಿಗೂ ಮಾಡಲಾಗಿಲ್ಲ. ಬದಲಿಗೆ ಗಡಿಯಲ್ಲಿ ಚೀನಾ 'ಸ್ಮಾರ್ಟ್ ಹಳ್ಳಿ'ಗಳನ್ನು" ನಿರ್ಮಿಸುತ್ತಿದೆ ಎಂದು ಖರ್ಗೆ ಕುಟುಕಿದರು.

ನರೇಂದ್ರ ಮೋದಿಯವರ ಈ ಭರವಸೆಗಳಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ ಮತ್ತು ತೀವ್ರ ಕೋಪಗೊಂಡಿದ್ದಾರೆ. ಬಿಜೆಪಿಯ 'ಸಂಕಲ್ಪ ಪತ್ರ' ಹೆಸರಿನ ಬಗ್ಗೆ ನಮಗೆ ತೀವ್ರ ಆಕ್ಷೇಪವಿದೆ, ಅದಕ್ಕೆ 'ಮಾಫಿನಾಮಾ' ಎಂದು ಹೆಸರಿಡಬೇಕು. ಜೊತೆಗೆ ಮೋದಿ ದೇಶದ ದಲಿತರು, ರೈತರು, ಯುವಕರು ಮತ್ತು ಬುಡಕಟ್ಟು ಜನರ ಕ್ಷಮೆ ಕೇಳಬೇಕಿತ್ತು ಎಂದು ಖೇರಾ ಹೇಳಿದರು.

ಇದೇ ವೇಳೆ, ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಮಾತನಾಡಿ, ಬಿಜೆಪಿಯು ಪ್ರಣಾಳಿಕೆಯಲ್ಲ, ಇದು ಜುಮ್ಲಾ ಪತ್ರ. ಪ್ರಧಾನಿ ಮೋದಿ 10 ವರ್ಷಗಳ ಆಡಳಿತದ ನಂತರವೂ ಜನರನ್ನು ಮೂರ್ಖರನ್ನಾಗಿಸಲು ಪ್ರಾರಂಭಿಸಿದ್ದಾರೆ. 25 ಕೋಟಿ ಜನರನ್ನು ಬಡತನದಿಂದ ಹೊರತೆಗೆಯಲಾಗಿದೆ ಎಂಬ ಹೇಳಿಕೆ ಪೊಳ್ಳಾಗಿದೆ. ದೇಶದಲ್ಲಿ ಪ್ರತಿ ಗಂಟೆಗೆ ಇಬ್ಬರು ರೈತರು ಮತ್ತು ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸತ್ಯ. ಬಿಜೆಪಿಯ ಪ್ರಣಾಳಿಕೆಯಲ್ಲಿ ಮಣಿಪುರ ಅಥವಾ ಚೀನಾದ ಪ್ರಸ್ತಾಪವಿಲ್ಲ. ಜನರು ನಿಮ್ಮ ಜುಮ್ಲಾಗಳು ಸಾಕು ಎಂದು ಹೇಳುತ್ತಿದ್ದಾರೆ ಎಂದರು.

ಇದನ್ನೂ ಓದಿ:ಬಿಜೆಪಿ ಪ್ರಣಾಳಿಕೆ: ಯುಸಿಸಿ, ಒಂದು ದೇಶ ಒಂದು ಚುನಾವಣೆ ಜಾರಿ, 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ

ABOUT THE AUTHOR

...view details