ನವದೆಹಲಿ/ಶಿಮ್ಲಾ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅದ್ಭುತ ಗೆಲುವಿನ ಬಗ್ಗೆ ಆ ಪಕ್ಷದ ಸಂಸದೆ ಕಂಗನಾ ರಣಾವತ್ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮಹಾವಿಕಾಸ್ ಅಘಾಡಿ ಮೈತ್ರಿಕೂಟವನ್ನು ಕಟುವಾಗಿ ಟೀಕಿಸಿದ್ದಾರೆ.
ಮಹಿಳೆಯರನ್ನು ಅವಮಾನಿಸುವ ರಾಕ್ಷಸರನ್ನು ಈ ಚುನಾವಣೆಯಲ್ಲಿ ಸೋಲಿಸಲಾಗಿದೆ. ಕೆಲವು ಮೂರ್ಖರು ಒಟ್ಟಾಗಿ ಸೇರಿದ ಮಾತ್ರಕ್ಕೆ ದೇಶ ಇಬ್ಭಾಗವಾಗುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಶೀವಸೇನೆ ಮೈತ್ರಿ ಜರಿದರು.
ಮಹಿಳೆಯರನ್ನು ಅವಮಾನಿಸುವವರು ರಾಕ್ಷಸರಿಗೆ ಸಮ. ಹೆಣ್ಣನ್ನು ಕೀಳಾಗಿ ಕಂಡವರು ಚುನಾವಣೆಯಲ್ಲಿ ಇದರ ಪರಿಣಾಮ ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ.
Jai Maharashtra 🇮🇳 pic.twitter.com/l5uaA63PXD
— Kangana Ranaut (@KanganaTeam) November 23, 2024
ಉದ್ಧವ್ ಸೋಲು ನಿರೀಕ್ಷಿಸಿದ್ದೆ: ಉದ್ಧವ್ ಠಾಕ್ರೆ ಬಗ್ಗೆ ಮಾತನಾಡಿರುವ ಕಂಗನಾ, ಅವರು ತಮ್ಮ ಸರಿ - ತಪ್ಪುಗಳನ್ನು ಗುರುತಿಸುವುದನ್ನು ಮರೆತಿದ್ದಾರೆ. ನಾನು ಅವರ ಸೋಲನ್ನು ಮೊದಲೇ ಊಹಿಸಿದ್ದೆ. ನಾವು ರಾಕ್ಷಸ ಮತ್ತು ದೈವ ಹೇಗೆ ಗುರುತಿಸುತ್ತೇವೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಮಹಿಳೆಯರನ್ನು ಅವಮಾನಿಸುವವರು ಶಿಕ್ಷೆ ಅನುಭವಿಸಲೇಬೇಕು ಎಂದರು.
ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಗೆಲುವಿಗೆ ಕಂಗನಾ ರಣಾವತ್ ಅವರು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದು ನಮ್ಮ ಪಕ್ಷಕ್ಕೆ ಐತಿಹಾಸಿಕ ಗೆಲುವು ಎಂದು ಹೇಳಿದ್ದಾರೆ. ರಾಜ್ಯದ ಜನತೆಗೆ ನಾವು ಆಭಾರಿಯಾಗಿದ್ದೇವೆ. ಹೊಸ ಮುಖ್ಯಮಂತ್ರಿಯನ್ನು ಪಕ್ಷದ ನಾಯಕರು ಆಯ್ಕೆ ಮಾಡಲಿದ್ದಾರೆ ಎಂದರು.
ನವೆಂಬರ್ 23 ರಂದು ಪ್ರಕಟವಾದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು 288 ವಿಧಾನಸಭಾ ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಬಿಜೆಪಿ 132 ಸ್ಥಾನ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 57, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 41 ಸ್ಥಾನ ಪಡೆದಿದೆ. ವಿಪಕ್ಷ ಮಹಾ ವಿಕಾಸ್ ಅಘಾಡಿಯ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) 20, ಕಾಂಗ್ರೆಸ್ 16, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಕೇವಲ 10 ಸ್ಥಾನಗಳಲ್ಲಿ ಗೆದ್ದಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಆಯ್ಕೆ ಕಗ್ಗಂಟು: ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಚರ್ಚೆ