ನವದೆಹಲಿ: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಬಜೆಟ್ ದಾಖಲೆ ಸರಿಗಟ್ಟಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಂದು 7ನೇ ಬಜೆಟ್ ಮಂಡಿಸಿದರು. ತಮ್ಮ ಭಾಷಣದ ಆರಂಭದಲ್ಲಿ ಭಾರತದ ಜನರು ನಮ್ಮ ಮೇಲೆ ವಿಶ್ವಾಸವಿಟ್ಟು, ಮೂರನೇ ಬಾರಿಗೆ ನಮಗೆ ಅಧಿಕಾರ ನೀಡಿದ್ದಾರೆ. ಈ ಮೂಲಕ ದೇಶವನ್ನು ಅಭಿವೃದ್ಧಿ, ಸಮೃದ್ಧಿ ಪಥಕ್ಕೆ ಕೊಂಡೊಯ್ಯಲು ನಮ್ಮ ಸರ್ಕಾರಕ್ಕೆ ಅವಕಾಶವನ್ನು ನೀಡಿದ್ದಾರೆ ಎಂದರು.
ಜಾಗತಿಕ ಆರ್ಥಿಕತೆ ಅನಿಶ್ಚಿತತೆಯ ಹಾದಿಯಲ್ಲಿದೆ. ಭಾರತದ ಹಣದುಬ್ಬರ ಸ್ಥಿರವಾಗಿದ್ದು, ಶೇ 4ರ ಗುರಿಯತ್ತ ಸಾಗುತ್ತಿದೆ. ಮಧ್ಯಂತರ ಬಜೆಟ್ನಲ್ಲಿ ತಿಳಿಸಿದಂತೆ ಉದ್ಯೋಗ, ಬಡತನ, ಮಹಿಳೆ, ಯುವಕರು, ರೈತರು, ಕೌಶಲ್ಯ, ಮಧ್ಯಮ ವರ್ಗ ಸುಧಾರಣೆಯ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ ಎಂದು ಹೇಳಿದರು.
ವಿಕಸಿತ ಭಾರತಕ್ಕೆ 9 ಆದ್ಯತೆಗಳ ಪಟ್ಟಿ ನೀಡಿದ ಸಚಿವೆ, ಕೃಷಿ, ಉದ್ಯೋಗ ಮತ್ತು ಕೌಶಲ್ಯ, ಸುಧಾರಿತ ಮಾನವ ಸಂಪನ್ಮೂಲಗಳು, ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ, ನಾವೀನ್ಯತೆಗಳಲ್ಲಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವ ನಮ್ಮ ಪ್ರಧಾನ ಆಧ್ಯತೆ ಎಂದು ತಿಳಿಸಿದರು.