ಕಾನ್ಪುರ (ಉತ್ತರಪ್ರದೇಶ):ಕಟ್ ಮಾಡುವಾಗ ಮಾತ್ರವಲ್ಲದೇ, ಖರೀದಿಸುವಾಗಲೂ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ಸಮಸ್ಯೆಯನ್ನು ನೀಗಿಸಲು ಉತ್ತರಪ್ರದೇಶದ ಕಾನ್ಪುರ ವಿವಿಯ ವಿಜ್ಞಾನಿಗಳು ಹೊಸ ಉಪಾಯವನ್ನು ಕಂಡು ಹಿಡಿದಿದ್ದಾರೆ. ಇದರಿಂದ ಪ್ರತಿವರ್ಷ ತಲೆದೋರುವ ಈರುಳ್ಳಿ ಕೊರತೆಯನ್ನು ಇಲ್ಲವಾಗಿಸಲು ಮುಂದಾಗಿದ್ದಾರೆ.
ಕಾನ್ಪುರದ ಚಂದ್ರಶೇಖರ್ ಆಜಾದ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 93 ಹೊಸ ತಳಿಯ ಈರುಳ್ಳಿ ಬೀಜಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇವುಗಳಲ್ಲಿ ವಿವಿಧ ಜಾತಿಯ ಕೆಂಪು ಮತ್ತು ಬಿಳಿ ಈರುಳ್ಳಿಯ ಬೀಜಗಳೂ ಇವೆ. ಇವುಗಳನ್ನು ಸರ್ವಕಾಲಕ್ಕೂ ಬೆಳೆಯಬಹುದಾಗಿದ್ದು, ದೇಶದಲ್ಲಿ ಪ್ರತಿ ವರ್ಷ ಎದುರಾಗುವ ಈರುಳ್ಳಿ ಕೊರತೆ ನೀಗಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಬೀಜಗಳನ್ನು ದೇಶಾದ್ಯಂತ ಎಲ್ಲ ರೈತರಿಗೆ ಒದಗಿಸಲಾಗುವುದು, ಎರಡೂ ಹಂಗಾಮಿನಲ್ಲಿ (ರಬಿ ಮತ್ತು ಖಾರಿಫ್) ಇವನ್ನು ಬೆಳೆಯಬಹುದು ಎಂದು ಹೇಳಿದ್ದಾರೆ.
ದೇಶದಲ್ಲಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶದಲ್ಲಿ ಈರುಳ್ಳಿ ಬೆಳೆಯುವುದು ತೀರಾ ಕಡಿಮೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಈರುಳ್ಳಿ ತಳಿಗಳನ್ನು ಶೋಧಿಸಲಾಗಿದೆ. ಮಹಾರಾಷ್ಟ್ರ, ಗುಜರಾತ್, ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಖಾರಿಫ್ ಋತುವಿನಲ್ಲಿ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ, ಯುಪಿಯಲ್ಲಿ ಅದು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ. ಪ್ರತಿ ವರ್ಷ ಇದೇ ಕಾರಣಕ್ಕಾಗಿ ಅಕ್ಟೋಬರ್- ನವೆಂಬರ್ನಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ ಎಂದು ಹಿರಿಯ ವಿಜ್ಞಾನಿ ಡಾ.ರಾಮ್ ಬಟುಕ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.