ಬೆಂಗಳೂರು : ಕಳೆದ ಡಿಸೆಂಬರ್ ತಿಂಗಳು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ತಮ್ಮ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ. ಟಿ ರವಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಹಾಗೂ ಹೊರಗೆ ನಡೆದ ಘಟನೆ ಬಗ್ಗೆ ದೂರು ನೀಡಿದ ಅವರು, ರಾಜ್ಯ ಪೊಲೀಸ್ ಹಾಗೂ ಸರ್ಕಾರ ನಡೆದುಕೊಂಡ ರೀತಿ ಬಗ್ಗೆ ವಿವರವಾಗಿ ದೂರು ನೀಡಿದ್ದಾರೆ. ದೂರಿನಲ್ಲಿ ಡಿಸಿಎಂ ಡಿ. ಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಬಸನಗೌಡ ಬಾದರ್ಲಿ, ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ವಿರುದ್ಧವೂ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಐಜಿ ಡಿಜಿಪಿ, ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಎಸ್ಪಿ ಭೀಮಾಶಂಕರ್ ಗುಳೇದ್ ಸೇರಿ ಕಿರಿಯ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ನಡೆಸಿರುವುದಾಗಿ ದೂರು ಸಲ್ಲಿಸಿದ್ದಾರೆ. ಸುಳ್ಳು ಎಫ್ಐಆರ್, ಪೊಲೀಸ್ ದೌರ್ಜನ್ಯ, ಅಪಹರಣ, ಕಾನೂನುಬಾಹಿರ ಬಂಧನ, ಎಫ್ಐಆರ್ ದಾಖಲಿಸದೇ ಇರುವುದು, ಕಸ್ಟೋಡಿಯಲ್ ಟಾರ್ಚರ್, ವಶದಲ್ಲಿರುವಾಗ ರಕ್ತಸ್ರಾವ, ಎನ್ಕೌಂಟರ್ಗೆ ಯತ್ನ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಸದನದಲ್ಲಿರುವಾಗ ನಡೆದ ಘಟನೆಗೆ ಸಭಾಪತಿ ಕ್ಲೀನ್ ಚಿಟ್ ಕೊಟ್ಟ ಬಳಿಕವೂ ಪೊಲೀಸರು ನನ್ನನ್ನು ಅಕ್ರಮವಾಗಿ ವಶಕ್ಕೆ ಪಡೆದು ದೌರ್ಜನ್ಯ ನಡೆಸಿದರು. ಸದನದಲ್ಲಿ ನಡೆದಿರುವ ಘಟನೆ ಬಗ್ಗೆ ಪೊಲೀಸರಿಗೆ, ಸಿಐಡಿಯವರಿಗೆ ಅಧಿಕಾರ ವ್ಯಾಪ್ತಿ ಇಲ್ಲದಿದ್ದರೂ ಡಿಸಿಎಂ ಡಿ. ಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸೂಚನೆ ಮೇರೆಗೆ ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ದೂರಿನಲ್ಲಿ ಸಿ ಟಿ ರವಿ ಆರೋಪಿಸಿದ್ದಾರೆ.
ಪೊಲೀಸರು ನನ್ನನ್ನು ಅಕ್ರಮವಾಗಿ ಜಲ್ಲಿ ಕ್ರಷರ್, ಕಬ್ಬಿನ ಗದ್ದೆ ಸೇರಿ ರಾತ್ರೋರಾತ್ರಿ ಹಲವು ಅಪಾಯಕಾರಿ ಕಡೆ ಕರೆದೊಯ್ದು ಎನ್ಕೌಂಟರ್ ಮಾಡಲು ಯತ್ನಿಸಿದ್ದಾರೆ. ಡಿಜಿಐಜಿಪಿಯವರೇ ಈ ಮಾನವ ಹಕ್ಕು ಉಲ್ಲಂಘನೆಯಲ್ಲಿ ಭಾಗಿದಾರರಾಗಿದ್ದಾರೆ. ಅವರು ಸಚಿವರು ಹೇಳಿದಂತೆ ಕಾನೂನುಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದ್ದಾರೆ.
ಹೀಗಾಗಿ ಬೆಳಗಾವಿ ಪೊಲೀಸ್ ಆಯುಕ್ತ, ಎಸ್ ಪಿ, ಕಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಬೇಕು. ಜೊತೆಗೆ ಘಟನೆ ಸಂಬಂಧ ಗೃಹ ಸಚಿವರು, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರನ್ನು ಸ್ಪಷ್ಟೀಕರಣಕ್ಕಾಗಿ ವಿಚಾರಣೆಗೆ ಕರೆಯಬೇಕು. ನನಗೆ ಕೇಂದ್ರ ಪಡೆಯಿಂದ ಭದ್ರತೆ ಒದಗಿಸಬೇಕು. ಹಾಗೂ ಮಾನವ ಹಕ್ಕು ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಎಫ್ಐಆರ್ ದಾಖಲಿಸಲು ಸಿಬಿಐಗೆ ಸೂಚಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ನೀಡಿದ ಸಿ.ಟಿ.ರವಿ - CT RAVI COMPLAINED TO GOVERNOR