ಚಂಡೀಗಢ: ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ನಯಾಬ್ ಸಿಂಗ್ ಸೈನಿ ಅಕ್ಟೋಬರ್ 15ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಹಲವು ಸಚಿವರು, ರಾಜ್ಯ ಬಿಜೆಪಿಯ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಬುಧವಾರ ಸೈನಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. ಬಿಜೆಪಿ ಕಳೆದ 10 ವರ್ಷದಿಂದ ಹರಿಯಾಣದಲ್ಲಿ ಆಡಳಿತ ನಡೆಸುತ್ತಿದೆ. ಪ್ರಸ್ತುತ ಚಿನಾವಣೆಯ ಗೆಲುವಿನ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.
ರಾಜ್ಯದ ಒಟ್ಟು 90 ಕ್ಷೇತ್ರಗಳಲ್ಲಿ ಬಿಜೆಪಿ 48, ಕಾಂಗ್ರೆಸ್ 37, ನ್ಯಾಷನಲ್ ಲೋಕ ದಳ 2 ಸ್ಥಾನಗಳಲ್ಲಿ ಗೆದ್ದಿದೆ. ಮೂರು ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಅವರು ಬೇಷರತ್ತಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ದುಷ್ಯಂತ್ ಚೌಟಲರ ಜನನಾಯಕ್ ಜನತಾ ಪಾರ್ಟಿ ಮತ್ತು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಯಾವುದೇ ಸ್ಥಾನ ಗೆಲ್ಲಲಿಲ್ಲ.